ತಹವ್ವುರ್ ರಾಣಾ ಗಡಿಪಾರು ತೀರ್ಪು ಮರು ಪರಿಶೀಲನೆಗೆ ಅಮೆರಿಕ ಸುಪ್ರೀಂ ಕೋರ್ಟ್ ನಕಾರ

PC: x.com/DDNewslive
ಹೊಸದಿಲ್ಲಿ: 26/11 ಮುಂಬೈ ದಾಳಿ ಘಟನೆಯ ಸಹ ಸಂಚುಗಾರ ತಹವ್ವೂರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ಆದೇಶಕ್ಕೆ ತುರ್ತು ತಡೆಯಾಜ್ಞೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕರಣದ ಸ್ಥಿತಿ ಬಗ್ಗೆ ಇರುವ ಮಾಹಿತಿಯಂತೆ ಸೋಮವಾರ ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ನ ಸಿಬ್ಬಂದಿ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 4ರಂದು ಕಾನ್ಫರೆನ್ಸ್ ವಿಧಾನದ ಮೂಲಕ ನಡೆಸಲು ಪಟ್ಟಿ ಮಾಡಿದ್ದರು.
ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾನ್ಫರೆನ್ಸ್ ವಿಧಾನದಲ್ಲಿ ವಿಚಾರಣೆ ನಡೆಸುವುದು ಎಂದರೆ, ಸಂಬಂಧಪಟ್ಟ ಕ್ಲರ್ಕ್ ದಾವೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಅಂದರೆ ದಾವೆ, ಪರ ಹಾಗೂ ವಿರೋಧದ ಹೇಳಿಕೆಗಳು ಇತ್ಯಾದಿಗಳನ್ನು ನ್ಯಾಯಮೂರ್ತಿಗಳ ಚೇಂಬರ್ಗೆ ಪರಾಮರ್ಶೆಗಾಗಿ ಕಳುಹಿಸಿಕೊಡುತ್ತಾರೆ. ಇದನ್ನು ಕಾನ್ಫರೆನ್ಸ್ ವೇಳೆ ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿಗಳು ಪರಾಮರ್ಶೆ ಮನವಿಯನ್ನು ಆಂಗೀಕರಿಸಬೇಕೇ ಎಂಬ ಬಗ್ಗೆ ನಿರ್ಧರಿಸುತ್ತಾರೆ.
ರಾಣಾನನ್ನು ಭಾರತಕ್ಕೆ ವಿಚಾರಣೆ ಎದುರಿಸಲು ಕರೆದೊಯ್ಯಲು ಅಮೆರಿಕದ ಅಧಿಕಾರಿಗಳು ಯಾವಾಗ ದಿನಾಂಕವನ್ನು ನಿಗದಿಪಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 6ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲೇನಾ ಕಂಗನ್ ನೀಡಿದ ತೀರ್ಪಿನ ಅನ್ವಯ ಗಡೀಪಾರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಆರೋಪಿ ತಹವ್ವುರ್ ರಾಣಾ, ಮುಖ್ಯ ನ್ಯಾಯಮೂರ್ತಿ ಜಾನ್ ಜೆ.ರಾಬರ್ಟ್ಸ್ ಜ್ಯೂನಿಯರ್ ಅವರಿಗೆ ಮನವಿ ಸಲ್ಲಿಸಿದ್ದ.