ವ್ಯಾಪಾರ ಸಮರದ ನಡುವೆಯೇ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಉಪಾಧ್ಯಕ್ಷ

PC: x.com/NewIndianXpress
ಹೊಸದಿಲ್ಲಿ: ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗಡುವು ವಿಧಿಸುವ ಒತ್ತಡಕ್ಕೆ ಮಣಿದು ದೇಶದ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
"ಬಂದೂಕಿನ ಮೊನೆಯಲ್ಲಿ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಮ್ಮ ದೇಶದ ಮತ್ತು ಜನತೆಯ ಹಿತಾಸಕ್ತಿಯನ್ನು ಕಾಪಾಡುವ ವರೆಗೆ, ಅವಸರಿಸುವುದಿಲ್ಲ" ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಪತ್ನಿ ಉಷಾ ಮತ್ತು ಎನ್ಎಸ್ಎ ಮೈಕ್ ವಾಲ್ಟ್ಸ್ ಈ ತಿಂಗಳ 21ರಂದು ದೆಹಲಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಹಲವು ವ್ಯಾಪಾರ ಪಾಲುದಾರ ದೇಶಗಳು ಉತ್ಸುಕವಾಗಿವೆ ಎಂದು ವಾಣಿಜ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ತಂಡದ ಪ್ರಮುಖ ಸದಸ್ಯರು ದೆಹಲಿಗೆ ಭೇಟಿ ನೀಡುವುದು ಖಚಿತವಾದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ವಾನ್ಸ್ ಮತ್ತು ಅವರ ಪತ್ನಿ ಭಾರತ ಮೂಲದ ಉಷಾ ಭೇಟಿ ಕೆಲ ವಾರಗಳ ಹಿಂದೆಯೇ ನಿಗದಿಯಾಗಿದ್ದರೂ, ಟ್ರಂಪ್ ಅವರ ಆಕ್ರಮಣಕಾರಿ ಸುಂಕ ನೀತಿಯಿಂದಾಗಿ ವಾನ್ಸ್ ಅವರ ಭೇಟಿ ವಿಭಿನ್ನ ಆಯಾಮ ಪಡೆದುಕೊಂಡಿದೆ. ವಾನ್ಸ್ ಕೂಡಾ ಸುಂಕ ನೀತಿಯ ಕಟ್ಟಾ ಬೆಂಬಲಿಗರಾಗಿದ್ದರೂ, ಮಾತುಕತೆ ಮುಂದುವರಿಯಲು ಇರುವ ಅಡೆ ತಡೆಗಳನ್ನು ಸುಲಲಿತವಾಗಿಸಲಿದ್ದಾರೆ ಎಂಬ ನಿರೀಕ್ಷೆ ಭಾರತದ್ದು.
ಪ್ರಧಾನಿ ನರೇಂದ್ರ ಮೋದಿಯವರು ವಾನ್ಸ್ ಕುಟುಂಬಕ್ಕೆ ಭೋಜನಕೂಟ ಏರ್ಪಡಿಸುವ ನಿರೀಕ್ಷೆ ಇದ್ದು, ಅವರ ಭೇಟಿ ಖಾಸಗಿ ಸ್ವರೂಪದ್ದು ಎನ್ನಲಾಗಿದೆ. ಆಗ್ರಾ ಮತ್ತು ಜೈಪುರಕ್ಕೆ ಅವರು ಭೇಟಿ ನೀಡುವ ಸಾಧ್ಯತೆ ಇದೆ. ಏತನ್ಮಧ್ಯೆ ಅಟ್ಲಾಂಟಾ ಸೆಂಟರ್ ಏರ್ಪಡಿಸಿದ ಭಾರತ-ಅಮೆರಿಕ ಫೋರಮ್ ನಲ್ಲಿ ಭಾಗವಹಿಸಲು ಅಮೆರಿಕದ ಭದ್ರತಾ ಸಲಹೆಗಾರ ವಾಲ್ಟ್ಸ್ ಕೂಡಾ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜತೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.