ದಿಲ್ಲಿ ವಿಧಾನಸಭಾ ಚುನಾವಣೆ | AI ತಂತ್ರಜ್ಞಾನವನ್ನು ಪಾರದರ್ಶಕವಾಗಿ ಬಳಸಿ: ರಾಜಕೀಯ ಪಕ್ಷಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ
Photo : PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸು ಪಡೆದಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪಾರದರ್ಶಕವಾಗಿ ಬಳಸಿ ಎಂದು ಗುರುವಾರ ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜಕೀಯ ಪಕ್ಷಗಳಿಗೆ ನೀಡಿರುವ ಸಲಹಾ ಸೂಚಿಯ ಪ್ರಕಾರ, ಚಿತ್ರಗಳು, ವಿಡಿಯೊಗಳು, ಆಡಿಯೊಗಳು ಅಥವಾ ಇತರ ಸಾಮಗ್ರಿಗಳನ್ನು ಸೃಷ್ಟಿಸುವಾಗ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಗಮಹಾರ್ಹವಾಗಿ ತಿರುಚಿರುವ ಸಾಮಗ್ರಿಗಳನ್ನು ‘ಕೃತಕ ಬುದ್ಧಿಮತ್ತೆ ಸೃಷ್ಟಿ’, ‘ಸುಧಾರಿತ ಡಿಜಿಟಲ್ ತುಣುಕು’, ಅಥವಾ ‘ಕೃತಕ ತುಣುಕು’ ಎಂದು ತೋರಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಚುನಾವಣಾ ಪ್ರಚಾರ ಜಾಹೀರಾತುಗಳು ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಿದ್ದರೆ ಅಥವಾ ತುಣುಕನ್ನು ಮಾರ್ಪಡಿಸಲಾಗಿದ್ದರೆ, ಅಂತಹ ಪ್ರಚಾರ ಸಾಮಗ್ರಿಗಳಿಗೆ ರಾಜಕೀಯ ಪಕ್ಷಗಳು ಇದೀಗ ಡಿಸ್ಕ್ಲೈಮರ್ ಪ್ರಕಟಿಸುವುದು ಅಗತ್ಯವಾಗಿದೆ.
“ತಪ್ಪು ಮಾಹಿತಿಗಳನ್ನು ಹರಡುವ ಕುರಿತು ಜಾಗೃತವಾಗಿರಬೇಕು, ವಿಶೇಷವಾಗಿ ಚುನಾವಣಾ ಪ್ರಕ್ರಿಯೆ ಬಗ್ಗೆ ವಿಶ್ವಾಸಾರ್ಹತೆಯನ್ನು ನಾಶಗೊಳಿಸುವ ಯಾವುದೇ ಕೃತ್ಯಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗದ ಆಡಳಿತಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಘನತೆ ಹಾಗೂ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ” ಎಂದು ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಲಾಗಿದೆ.