ಬಲ ಪ್ರಯೋಗ ಕೊನೆಯ ಆಯ್ಕೆಯಾಗಬೇಕು: ರೈತ ಪ್ರತಿಭಟನೆ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್
Photo: PTI
ಹೊಸದಿಲ್ಲಿ: ರೈತರ ಪ್ರತಿಭಟನೆ ಕುರಿತು ಇಂದು ಪ್ರತಿಕ್ರಿಯಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಈ ವಿಚಾರವನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು ಹಾಗೂ ಬಲ ಪ್ರಯೋಗವು ಕೊನೆಯ ಆಯ್ಕೆಯಾಗಬೇಕು ಎಂದು ಹೇಳಿದೆ.
ರೈತರ ದಿಲ್ಲಿ ಚಲೋ ಪ್ರತಿಭಟನೆಗೆ ಸಂಬಂಧಿಸಿದ ಎರಡು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ಪೀಠ ನಡೆಸಿದೆ.
ಪ್ರತಿಭಟನಾಕಾರರನ್ನು ದಿಲ್ಲಿ ಪ್ರವೇಶಿಸುವುದನ್ನು ತಡೆಯಲು ರಸ್ತೆಗಳನ್ನು ಬಂದ್ ಮಾಡುವ ಹರ್ಯಾಣ ಸರ್ಕಾರದ ಕ್ರಮವನ್ನು ಒಂದು ಅರ್ಜಿ ಖಂಡಿಸಿದರೆ, ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುವುದು ಜನರು ಮತ್ತು ಅವರ ದೈನಂದಿನ ಕಾರ್ಯಾಚರಣೆಗಳನ್ನು ಬಾಧಿಸುತ್ತದೆ ಎಂದು ಇನ್ನೊಂದು ಅರ್ಜಿ ಹೇಳಿದೆ.
ಪ್ರತಿಭಟನಾಕಾರರಿಗೆ ಪ್ರತಿಭಟಿಸುವ ಮೂಲಭೂತ ಹಕ್ಕು ಇದ್ದರೆ, ನಾಗರಿಕರಿಗೆ ಈ ಪ್ರತಿಭಟನೆಯಿಂದ ಯಾವುದೇ ಅನಾನುಕೂಲವುಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಮೂಲಭೂತ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ನಡುವೆ ಸಮತೋಲನವಿರಬೇಕು. ಎರಡೂ ಹಕ್ಕುಗಳನ್ನು ಪ್ರತ್ಯೇಕವಾಗಿ ನೋಡಲಾಗದು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು. ಎಲ್ಲಾ ಸಂಬಂಧಿತರು ಜೊತೆಗೆ ಕುಳಿತು ಸಮಸ್ಯೆ ಪರಿಹರಿಸಬೇಕು,” ಎಂದು ಪೀಠ ಹೇಳಿದೆ.
ಪ್ರತಿಭಟನೆ ನಡೆಸಲು ಸ್ಥಳಗಳನ್ನು ನಿರ್ಧರಿಸುವಂತೆ ಸೂಚಿಸಿ ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಪಂಜಾಬ್, ಹರ್ಯಾಣ ಮತ್ತು ದಿಲ್ಲಿ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಮುಂದಿನ ವಿಚಾರಣೆ ಫೆಬ್ರವರಿ 15ರಂದು ನಡೆಯಲಿದೆ.