ಉತ್ತರ ಪ್ರದೇಶ| ಹೆದ್ದಾರಿಯಲ್ಲಿ ರುಂಡವಿಲ್ಲದ ಮಹಿಳೆಯ ನಗ್ನ ಮೃತದೇಹ ಪತ್ತೆ; ಅತ್ಯಾಚಾಗೈದು ಹತ್ಯೆ ನಡೆಸಿರುವ ಶಂಕೆ
ಸಾಂದರ್ಭಿಕ ಚಿತ್ರ
ಕಾನ್ಪುರ: ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಗುಜೈನಿ ಪ್ರದೇಶದಲ್ಲಿ ಮಹಿಳೆಯೊಬ್ಬರ ರುಂಡವಿಲ್ಲದ ನಗ್ನ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ಮತ್ತು ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿನ್ನೂ ಮೃತ ಮಹಿಳೆಯ ಗುರುತನ್ನು ಪತ್ತೆ ಹಚ್ಚಬೇಕಿದ್ದು, ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ ಎಂದು ವರದಿಯಾಗಿದೆ.
ಹತ್ತಿರದ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, ಪತ್ತೆಯಾಗಿರುವ ಮೃತ ಮಹಿಳೆಯ ದೇಹಾಕೃತಿಯನ್ನೇ ಹೋಲುವ ಮಹಿಳೆಯೊಬ್ಬರು ಆಸ್ಪತ್ರೆಯ ಮುಂದೆ ಹಾದು ಹೋಗಿರುವುದು ಕಂಡು ಬಂದಿದೆ. ಈ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಅವುಗಳಿಂದ ಯಾವುದಾದರೂ ಸುಳಿವು ಪತ್ತೆ ಹಚ್ಚಲು ಹಾಗೂ ಸ್ಥಳೀಯರಿಂದ ಆ ಮಹಿಳೆಯ ಕುರಿತು ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವೊಂದು ಮಾದರಿಗಳನ್ನು ಸಂಗ್ರಹಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದೆ. ಇದು ಅತ್ಯಾಚಾರವೊ ಅಥವಾ ಅಪಘಾತವೊ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ, ಈ ಪ್ರಕರಣದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಈ ಪ್ರಕರಣದ ಕುರಿತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.