ಉತ್ತರ ಪ್ರದೇಶ | ಜಾಮೀನು ಬಿಡುಗಡೆಗೊಂಡಿದ್ದ ಅತ್ಯಾಚಾರ ಆರೋಪಿಯಿಂದ ಸಂತ್ರಸ್ತೆಯ ಹತ್ಯೆ
ಸಾಂದರ್ಭಿಕ ಚಿತ್ರ
ಸಂಭಲ್ : ಕಳೆದ ಫೆಬ್ರವರಿಯಲ್ಲಿ 14 ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯು ಆಕೆಯನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಬುಧವಾರ ತಡರಾತ್ರಿ ಉ.ಪ್ರದೇಶದ ಸಂಭಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭವಿಸಿದೆ.
ಸೆ.18ರಂದು ರಾತ್ರಿ 10:30ರ ಸುಮಾರಿಗೆ ಸಂತ್ರಸ್ತ ಬಾಲಕಿ ತನ್ನ ತಾಯಿ ಮತ್ತು ಸೋದರನೊಂದಿಗೆ ಗ್ರಾಮಕ್ಕೆ ಮರಳುತ್ತಿದ್ದಾಗ ತನ್ನ ಸೋದರಮಾವನೊಂದಿಗೆ ಅವರನ್ನು ಅಡ್ಡಗಟ್ಟಿದ್ದ 20ರ ಹರೆಯದ ಆರೋಪಿಯು ತುಂಬ ಹತ್ತಿರದಿಂದ ಆಕೆಯ ಮೇಲೆ ಎರಡು ಸಲ ಗುಂಡು ಹಾರಿಸಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ತಾಯಿ ಮತ್ತು ಸೋದರ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ ಸಂಭಲ್ ಎಸ್ಪಿ ಕೃಷ್ಣಕುಮಾರ ಬಿಷ್ಣೋಯಿ ಅವರು, ಘಟನೆಯ ಬಳಿಕ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದೆ. ಅವರ ಸಂಭಾವ್ಯ ಅಡಗುದಾಣಗಳ ಮೇಲೆ ದಾಳಿಗಳ ಹೊರತಾಗಿಯೂ ಅವರು ಪತ್ತೆಯಾಗಿಲ್ಲ ಎಂದರು.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದರೂ,ಸಂತ್ರಸ್ತ ಬಾಲಕಿಯ ಜೊತೆಯಲ್ಲಿದ್ದ ತಾಯಿ ಮತ್ತು ಸೋದರನ ಮೇಲೆ ದಾಳಿ ಏಕೆ ನಡೆದಿರಲಿಲ್ಲ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
ಈ ವರ್ಷದ ಫೆಬ್ರವರಿಯಲ್ಲಿ ಬಾಲಕಿಯ ಅಪಹರಣ ಮತ್ತು ಅತ್ಯಾಚಾರದ ಆರೋಪದಲ್ಲಿ ಆರೋಪಿಯನ್ನು ಮತ್ತು ಆತನಿಗೆ ಕುಮ್ಮಕ್ಕು ನೀಡಿದ್ದ ಸೋದರಮಾವನನ್ನು ಬಂಧಿಲಾಗಿತ್ತು. ಸೆ.6ರಂದು ಅವರಿಬ್ಬರೂ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಬಾಲಕಿಯ ಕುಟುಂಬವು ಕಳೆದ ವರ್ಷ ಸ್ವಗ್ರಾಮದಿಂದ ಗಾಝಿಯಾಬಾದ್ಗೆ ಸ್ಥಳಾಂತರಗೊಂಡಿತ್ತು ಮತ್ತು ಆರೋಪಿ ಅಲ್ಲಿ ವಾಸವಾಗಿದ್ದು,ಕೂಲಿಕಾರ್ಮಿಕನಾಗಿದ್ದ. ತನ್ನ ಪುತ್ರಿಯ ಅಪಹರಣ ಮತ್ತು ಅತ್ಯಾಚಾರದ ಆರೋಪದಲ್ಲಿ ತಂದೆ ಫೆ.23ರಂದು ಗಾಝಿಯಾಬಾದ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ಮತ್ತು ಆತನ ಸೋದರ ಮಾವನನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದರು ಎಂದು ಸಂಭಲ್ ಹೆಚ್ಚುವರಿ ಎಸ್ಪಿ ಶಿರೀಶಚಂದ್ರ ತಿಳಿಸಿದರು.
ಸಂತ್ರಸ್ತ ಬಾಲಕಿ ಮತ್ತು ತಾಯಿ ತಮ್ಮ ಗ್ರಾಮಕ್ಕೆ ಮರಳಿದ್ದಾಗ ಈ ಹತ್ಯೆ ನಡೆದಿದೆ ಎಂದರು.