ಉತ್ತರಪ್ರದೇಶ: ಯತಿ ನರಸಿಂಹಾನಂದ ವಿರುದ್ಧದ ಪ್ರತಿಭಟನೆ ವೇಳೆ ಕಲ್ಲು ತೂರಾಟ ಆರೋಪ: 6 ಮಂದಿ ಬಂಧನ
ಯತಿ ನರಸಿಂಹಾನಂದ | PC :PTI
ಉತ್ತರಪ್ರದೇಶ: ದ್ವೇಷ ಭಾಷಣಗಾರ ಯತಿ ನರಸಿಂಹಾನಂದ ಗಿರಿ ವಿರುದ್ಧದ ಪ್ರತಿಭಟನೆಯ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆರು ಮಂದಿಯನ್ನು ಗಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು The Indian Express ವರದಿ ಮಾಡಿದೆ.
ಬಂಧಿತ ಆರು ಮಂದಿಯನ್ನು ಗಾಝಿಯಾಬಾದ್ ನಿವಾಸಿಗಳಾದ ಸಮೀರ್ ಮೊಹಮ್ಮದ್, ಸಾಜಿದ್, ಅಮೀರ್, ಶೋಯೆಬ್, ಫರ್ಮಾನ್ ಮತ್ತು ಶಹಝಾದ್ ಎಂದು ಗುರುತಿಸಲಾಗಿದೆ.
ಉತ್ತರಪ್ರದೇಶದ ಗಾಝಿಯಾಬಾದ್ ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ನರಸಿಂಹಾನಂದ ಸೆ.29ರಂದು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ. ಯತಿ ನರಸಿಂಹಾನಂದ ಹೇಳಿಕೆಯ ವಿವಾದಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಮತ್ತು ತೆಲಂಗಾಣದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆದಿದ್ದವು.
ವಿವಾದಾತ್ಮಕ ಹೇಳಿಕೆ ನೀಡಿದ್ದ ಯತಿ ನರಸಿಂಹಾನಂದ ವಿರುದ್ಧ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಎಫ್ ಐಆರ್ ದಾಖಲಾಗಿತ್ತು. ಗಾಝಿಯಾಬಾದ್ ದೇವಸ್ಥಾನದ ಬಳಿ ನರಸಿಂಹಾನಂದ ವಿರುದ್ಧದ ಪ್ರತಿಭಟನೆ ವೇಳೆ ಉದ್ವಿಗ್ನತೆ ಉಂಟಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗಾಝಿಯಾಬಾದ್ ನ ಸಹಾಯಕ ಪೊಲೀಸ್ ಕಮಿಷನರ್ ಲಿಪಿ ನಾಗೈಚ್ ಹೇಳಿದ್ದಾರೆ.