ಉತ್ತರ ಪ್ರದೇಶ | ಕುರ್ಚಿಯಲ್ಲಿ ಕುಳಿತುಕೊಂಡಿದ್ದಕ್ಕೆ ಥಳಿಸಿ ಅವಮಾನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ದಲಿತ ವ್ಯಕ್ತಿ
ಸಾಂದರ್ಭಿಕ ಚಿತ್ರ
Sಆಗ್ರಾ: ಸ್ಥಳೀಯವಾಗಿ ಆಯೋಜನೆಗೊಂಡಿದ್ದ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ತನ್ನನ್ನು ಥಳಿಸಿ ಅಪಮಾನಿಸಿದ್ದರಿಂದ ಮನನೊಂದ ದಲಿತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ರಾತ್ರಿ ಕಸ್ ಗಂಜ್ ಜಿಲ್ಲೆಯ ಸೊರೊನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಲೇಂಪುರ್ ವಿವಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರಮೇಶ್ ಚಂದ್ ಎಂದು ಗುರುತಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆತನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಿಗೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೃತನ ಕುಟುಂಬದ ಸದಸ್ಯರು ಹಾಗೂ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಿರುವ ಮೃತ ವ್ಯಕ್ತಿಯ ಪತ್ನಿ ರಾಮ್ ರತಿ, “ರವಿವಾರ ರಾತ್ರಿ 9 ಗಂಟೆಗೆ ನೆರೆಮನೆಯಲ್ಲಿ ನಡೆಯುತ್ತಿದ್ದ ರಾಮ್ ಲೀಲಾ ಕಾರ್ಯಕ್ರಮಕ್ಕೆ ತೆರಳಿದ್ದ ನನ್ನ ಪತಿ, ಖಾಲಿ ಕುರ್ಚಿಯ ಮೇಲೆ ಕುಳಿತಿದ್ದರು. ಅದನ್ನು ಸಂಘಟಕರಾದ ಕಾನ್ ಸ್ಟೇಬಲ್ ಬಹದ್ದೂರ್ ಹಾಗೂ ವಿಕ್ರಮ್ ಚೌಧರಿ ಎಂಬವರು ಅವರನ್ನು ಕುರ್ಚಿಯಿಂದ ಕೆಳಕ್ಕೆ ನೂಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಸಂಘಟಕರ ಸೂಚನೆಯ ಮೇರೆಗೆ ಪೊಲೀಸರು ನನ್ನ ಪತಿಯನ್ನು ಬರ್ಬರವಾಗಿ ಥಳಿಸಿದ್ದು, ಅವರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ನಂತರ, ಆತನ ಕುತ್ತಿಗೆಯ ಸುತ್ತ ಟವೆಲ್ ಸುತ್ತಿ, ಕುರ್ಚಿಯಿಂದ ನೆಲದ ಮೇಲೆ ಉರುಳಿಸಿದ್ದಾರೆ. ಕೆಳಗೆ ಬಿದ್ದ ಅವರನ್ನು ಒದ್ದು, ಗುದ್ದಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ಈ ಅವಮಾನದಿಂದ ಮನನೊಂದ ರಮೇಶ್ ಚಂದ್, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹ ಸೋಮವಾರ ರಾತ್ರಿ ಕೋಣೆಯಲ್ಲಿ ಕಂಡು ಬಂದಿತು ಎಂದು ಪತ್ನಿ ರಾಮ್ ರತಿ ದೂರಿನಲ್ಲಿ ವಿವರಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.