ಉತ್ತರಪ್ರದೇಶ | ಮಹಿಳಾ ಕಾನ್ಸ್ಟೇಬಲ್ ಮೇಲೆಯೇ ಅತ್ಯಾಚಾರ
ಸಾಂದರ್ಭಿಕ ಚಿತ್ರ
ಕಾನ್ಪುರ : ಕರ್ವಾ ಚೌತ್ ಆಚರಿಸಲು ತನ್ನ ಅತ್ತೆ-ಮಾವನ ಮನೆಗೆ ಹೋಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಮೇಲೆ ಉತ್ತರಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಹಿಳಾ ಕಾನ್ಸ್ಟೇಬಲ್ ತನ್ನ ಕರ್ತವ್ಯ ಮುಗಿಸಿ ಉಪವಾಸ ಕೊನೆಗೊಳಿಸಲು ಅತ್ತೆ-ಮಾವನ ಮನೆಗೆ ಹೋಗುತ್ತಿದ್ದಾಗ ಆರೋಪಿ ಕಲ್ಲು ಯಾನೆ ಧರ್ಮೇಂದ್ರ ಪಾಸ್ವಾನ್ (34) ತನ್ನ ವಾಹನದಲ್ಲಿ ಕರೆದೊಯ್ಯುವುದಾಗಿ ತಿಳಿಸಿದನು. ಮಾರ್ಗ ಮಧ್ಯದಲ್ಲಿ ಅವನು ಮಹಿಳೆಯನ್ನು ಸಮೀಪದ ಗದ್ದೆಗೆ ಒಯ್ದು ಅತ್ಯಾಚಾರ ಎಸಗಿದನು ಎಂದು ಆರೋಪಿಸಲಾಗಿದೆ.
ಮಹಿಳೆಯು ತೀವ್ರ ಪ್ರತಿರೋಧ ಒಡ್ಡಿದ್ದು, ಆರೋಪಿಯ ಬೆರಳಿಗೆ ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಮೇಲೆಯೇ ಅತ್ಯಾಚಾರ ನಡೆಯುತ್ತಿರುವಾಗ, ಜನ ಸಾಮಾನ್ಯರ ಪಾಡೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
►ಕರ್ವಾ ಚೌತ್ ದಿನವೇ ಗಂಡನಿಗೆ ವಿಷ ಹಾಕಿ ಕೊಂದ ಮಹಿಳೆ
ಉತ್ತರಪ್ರದೇಶದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ಮಹಿಳೆಯೊಬ್ಬಳು ಕರ್ವಾ ಚೌತ್ ಉಪವಾಸ ಆಚರಿಸಿದ ಬಳಿಕ ತನ್ನ ಗಂಡನಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಮಾಯಿಲ್ಪುರ ಗ್ರಾಮದಲ್ಲಿ ರವಿವಾರ ಈ ಘಟನೆ ನಡೆದಿದೆ. ಕರ್ವಾ ಚೌತ್ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಆಚರಿಸಿದ ಬಳಿಕ ಆರೋಪಿ ಸವಿತಾ ತನ್ನ 32 ವರ್ಷದ ಗಂಡ ಶೈಲೇಶ್ ಕುಮಾರ್ರನ್ನು ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಗಂಡ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಆರೋಪಿಗೆ ಸಂಶಯವಿತ್ತು ಎನ್ನಲಾಗಿದೆ. ಸಂಜೆ ಸವಿತಾ ಉಪವಾಸ ಮುಗಿಸಿದ ಬಳಿಕ, ದಂಪತಿಯ ನಡುವೆ ಜಗಳ ಆರಂಭವಾಯಿತು. ಆದರೂ, ಬಳಿಕ ಅದು ತಣ್ಣಗಾದಂತೆ ಕಂಡುಬಂತು.
ರಾತ್ರಿ ದಂಪತಿ ಜೊತೆಯಾಗಿ ಊಟ ಮಾಡಿದ ಬಳಿಕ, ನೆರೆಮನೆಯಿಂದ ವಸ್ತುವೊಂದನ್ನು ತರುವಂತೆ ಸವಿತಾ ತನ್ನ ಗಂಡನಿಗೆ ಸೂಚಿಸಿದಳು ಎನ್ನಲಾಗಿದೆ. ಗಂಡ ನೆರೆಮನೆಗೆ ಹೋದಾಗ ಅವಳು ಮನೆಯಿಂದ ಪರಾರಿಯಾದಳು ಎಂದು ಪೊಲೀಸರು ತಿಳಿಸಿದರು.
ಬಳಿಕ ಶೈಲೇಶ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಅವರು ಕೊನೆಯುಸಿರೆಳೆದರು.