ಉತ್ತರ ಪ್ರದೇಶ | ಪತ್ರಕರ್ತೆಯ ವಿರುದ್ಧ ಬಲವಂತದ ಕ್ರಮ ಸಲ್ಲದು : ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಪತ್ರಕರ್ತೆ ಮಮತಾ ತ್ರಿಪಾಠಿ ವಿರುದ್ಧ ದಾಖಲಾಗಿರುವ ನಾಲ್ಕು FIR ಸಂಬಂಧ ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಕೂಡದು ಎಂದು ಗುರುವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧದ FIR ರದ್ದುಗೊಳಿಸಬೇಕು ಎಂದು ಕೋರಿ ಪತ್ರಕರ್ತೆ ಮಮತಾ ತ್ರಿಪಾಠಿ ಸಲ್ಲಿಸಿರುವ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನ್ಯಾ. ಬಿ.ಆರ್.ಗವಾಯಿ, ನ್ಯಾ. ಪಿ.ಕೆ.ಮಿಶ್ರಾ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ FIR ರಾಜಕೀಯ ಪ್ರೇರಿತವಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ದುರುದ್ದೇಶಪೂರಿತ ಪ್ರಯತ್ನದ ಭಾಗವಾಗಿ ದಾಖಲಿಸಲಾಗಿದೆ ಎಂದು ಮಮತಾ ತ್ರಿಪಾಠಿ ಆರೋಪಿಸಿದ್ದಾರೆ.
ಮಮತಾ ತ್ರಿಪಾಠಿ ಪ್ರಕಾರ, ಅವರ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ಈ FIR ಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, “ಲೇಖನಗಳಿಗೆ ಸಂಬಂಧಿಸಿದಂತೆ ಅರ್ಜಿದಾರೆ ಮಮತಾ ತ್ರಿಪಾಠಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ನಿರ್ದೇಶನ ನೀಡಿತು.
ನಾಲ್ಕು ವಾರಗಳ ನಂತರ ಈ ಅರ್ಜಿಯ ವಿಚಾರಣೆ ನಡೆಯಲಿದೆ.