ಉತ್ತರ ಪ್ರದೇಶ | ಉರ್ದು ಶಿಕ್ಷಕನಿಗೆ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಬಲವಂತ ಮಾಡಿ ದೌರ್ಜನ್ಯ : ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಘಾಝಿಯಾಬಾದ್: ಉರ್ದು ಶಿಕ್ಷಕನಿಗೆ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಬಲವಂತ ಮಾಡಿ ಲಿಫ್ಟ್ ನಿಂದ ಹೊರಹಾಕಿ ದೌರ್ಜನ್ಯ ಎಸಗಿದ ಆರೋಪದ ಮೇಲೆ 36 ವರ್ಷದ ಆರೋಪಿಯೋರ್ವನನ್ನು ಘಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಪಂಚಶೀಲ್ ವೆಲ್ಲಿಂಗ್ಟನ್ ನಲ್ಲಿ ಈ ಘಟನೆ ನಡೆದಿದೆ. ನಾವು ಆರೋಪಿಯನ್ನು ಬಂಧಿಸಿದ್ದೇವೆ, ಬಂಧಿತನನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಘಾಝಿಯಾಬಾದ್ ವೇವ್ ಸಿಟಿ ಸಹಾಯಕ ಪೊಲೀಸ್ ಕಮಿಷನರ್ ಲಿಪಿ ನಾಗೈಚ್ ಹೇಳಿದ್ದಾರೆ.
ಉರ್ದು ಶಿಕ್ಷಕ ಮೊಹಮ್ಮದ್ ಅಲಂಗೀರ್ ದೂರಿನ ಮೇರೆಗೆ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126(2), 352, 351(2) ಮತ್ತು 351(3) ರಡಿ ಎಫ್ ಐಆರ್ ದಾಖಲಿಸಲಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ವಸತಿ ಸಮುಚ್ಚಯದ ನೆಲ ಮಹಡಿಯಲ್ಲಿ ಆರೋಪಿ ನನ್ನನ್ನು ವಿಚಿತ್ರವಾಗಿ ನೋಡಿದ್ದಾನೆ. ಬಳಿಕ ಎಲ್ಲಿಗೆ ಹೋಗುತ್ತಿ ಎಂದು ಕೇಳಿದ್ದಾನೆ. 16ನೇ ಮಹಡಿಯಲ್ಲಿರುವ ವಿದ್ಯಾರ್ಥಿಯೊಬ್ಬನಿಗೆ ಉರ್ದು ಕಲಿಸಲು ಹೋಗುತ್ತಿದ್ದೇನೆ ಎಂದಾಗ ಆರೋಪಿ "ಜೈ ಶ್ರೀ ರಾಮ್" ಘೋಷಿಸುವಂತೆ ಬಲವಂತ ಮಾಡಿದ್ದಾನೆ. ನಾನು ಸುಮ್ಮನೆ ಮುಂದೆ ನಡೆದಾಗ ಕುಮಾರ್ ಮತ್ತಷ್ಟು ಕೋಪಗೊಂಡಿದ್ದಾನೆ. ನಾನು ತೆರಳುತ್ತಿದ್ದ ಲಿಫ್ಟ್ ಮೊದಲ ಮಹಡಿಯಲ್ಲಿ ನಿಂತಾಗ ಕುಮಾರ್ ನನ್ನನ್ನು ಲಿಫ್ಟ್ ನಿಂದ ಹೊರಹಾಕಿದ್ದಾನೆ. ನನ್ನನ್ನು 16ನೇ ಮಹಡಿಗೆ ಹೋಗದಂತೆ ತಡೆದಿದ್ದಾನೆ. ಇತರರು ನನ್ನನ್ನು ವಸತಿಸಮುಚ್ಚಯದಿಂದ ಹೊರ ಹೋಗುವಂತೆ ಸೂಚಿಸಿದ್ದಾರೆ ಎಂದು ಶಿಕ್ಷಕ ಆರೋಪಿಸಿದ್ದಾರೆ.