ಉತ್ತರ ಪ್ರದೇಶ | ವರದಿ ಪ್ರಕಟಗೊಂಡ ಆರು ತಿಂಗಳ ಬಳಿಕ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತನ ಬಂಧನ
ಬಿಜೆಪಿ ಸಂಸದ ಅತುಲ್ ಗರ್ಗ್ | PC : X/@AtulGarg
ಘಾಝಿಯಾಬಾದ್ : ಸ್ಥಳೀಯ ಬಿಜೆಪಿ ಸಂಸದ ಅತುಲ್ ಗರ್ಗ್ ಅವರ ದೂರಿನ ಆಧಾರದಲ್ಲಿ ಪೋಲಿಸರು ಸ್ಥಳೀಯ ಹಿಂದಿ ದೈನಿಕ ‘ಆಪ್ ಅಭಿ ತಕ್’ನ ಸಂಪಾದಕ ಇಮ್ರಾನ್ ಖಾನ್ ಅವರನ್ನು ಶನಿವಾರ ಬಂಧಿಸಿದ್ದಾರೆ. ಖಾನ್ ಆರು ತಿಂಗಳ ಹಿಂದೆ ಪ್ರಕಟಿಸಿದ್ದ ವರದಿಯಲ್ಲಿ ತನ್ನ ಮಾನಹಾನಿಯನ್ನುಂಟು ಮಾಡಿದ್ದಾರೆ ಎಂದು ಗರ್ಗ್ ಆರೋಪಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ಮುನ್ನ ಘಾಝಿಯಾಬಾದ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಲಿ ಶರ್ಮಾ ಅವರು ಎ.12ರಂದು ಕರೆದಿದ್ದ ಪತ್ರಿಕಾಗೋಷ್ಠಿಯ ಕುರಿತು ಖಾನ್ ಅವರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.‘ಬಿಜೆಪಿಯು ಭೂಮಾಫಿಯಾ ಅತುಲ್ ಗರ್ಗ್ರನ್ನೇ ಲೋಕಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ’ ಎಂಬ ಶೀರ್ಷಿಕೆಯ ವರದಿಯು ಶರ್ಮಾ ಅವರು ಗರ್ಗ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾಡಿದ್ದ ಭೂಕಬಳಿಕೆ ಆರೋಪಗಳನ್ನು ಉಲ್ಲೇಖಿಸಿತ್ತು.
ಚುನಾವಣೆಯಲ್ಲಿ ಗರ್ಗ್ 8.54 ಲಕ್ಷ ಮತಗಳನ್ನು ಗಳಿಸಿ ವಿಜಯಿಯಾಗಿದ್ದರೆ ಶರ್ಮಾರಿಗೆ 5.17 ಲಕ್ಷ ಮತಗಳು ಬಿದ್ದಿದ್ದವು. ಸುಮಾರು ಆರು ತಿಂಗಳುಗಳ ಬಳಿಕ ಅ.6 ರಂದು ಇಲ್ಲಿಯ ಕವಿನಗರ ಪೋಲಿಸ್ ಠಾಣೆಯಲ್ಲಿ ಶರ್ಮಾ ಮತ್ತು ಖಾನ್ ವಿರುದ್ಧ ಗರ್ಗ್ ಮಾನಹಾನಿ ದೂರನ್ನು ಸಲ್ಲಿಸಿದ್ದು,ಅದೇ ದಿನ ಪೋಲಿಸರು ಐಪಿಸಿ ಮತ್ತು ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಸುದ್ದಿಸಂಸ್ಥೆಯು ಗರ್ಗ್ರನ್ನು ಸಂಪರ್ಕಿಸಿದಾಗ, ತಾನು ಪೂರ್ಣ ವರದಿಯನ್ನು ಓದಿಲ್ಲ, ಆದರೆ ಶೀರ್ಷಿಕೆಯು ತನ್ನನ್ನು ‘ಭೂಮಾಫಿಯಾ’ಎಂದು ಉಲ್ಲೇಖಿಸಿದೆ. ವರದಿಯು ತನ್ನ ಸಾರ್ವಜನಿಕ ವರ್ಚಸ್ಸು ಮತ್ತು ಖ್ಯಾತಿಗೆ ಧಕ್ಕೆಯನ್ನುಂಟು ಮಾಡಲು ಪ್ರಯತ್ನಿಸಿತ್ತು ಎಂದು ತಿಳಿಸಿದರು.
‘ನಾನು 31,000 ಚ.ಮೀ.ಸರಕಾರಿ ಭೂಮಿಯನ್ನು ಕಬಳಿಸಿದ್ದೇನೆ ಮತ್ತು ಅದರಲ್ಲಿ ಟೌನ್ಶಿಪ್ ನಿರ್ಮಾಣ ಮಾಡಿದ್ದೇನೆ ಎಂದು ಶರ್ಮಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವ್ಯವಸ್ಥಿತ ಪಿತೂರಿಯ ಭಾಗವಾಗಿ ಖಾನ್ ತನ್ನ ಪತ್ರಿಕೆಯಲ್ಲಿ ಈ ಬಗ್ಗೆ ವಿಸ್ತೃತ ವರದಿಯನ್ನು ಪ್ರಕಟಿಸಿದ್ದರು’ ಎಂದು ಗರ್ಗ್ ತನ್ನ ದೂರಿನಲ್ಲಿ ಹೇಳಿದ್ದಾರೆ.
ವರದಿಯನ್ನು ಬರೆದಿದ್ದ ಪತ್ರಿಕೆಯ ವರದಿಗಾರ ಸುಭಾಷ್ ಚಂದ್ರ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಶರ್ಮಾ ಹೇಳಿದ್ದನ್ನೇ ವರದಿಯಲ್ಲಿ ಪ್ರಕಟಿಸಲಾಗಿತ್ತು ಎಂದು ತಿಳಿಸಿದರು.
ಶರ್ಮಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಅವರ ‘ವೈಯಕ್ತಿಕ ಅಭಿಪ್ರಾಯ’ವಾಗಿತ್ತು ಎಂದು ಹೇಳಿದ ಉ.ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಜೇಂದ್ರ ಯಾದವ, ಆದರೆ ಖಾನ್ ಅವರನ್ನು ಬಂಧಿಸುವ ಮೂಲಕ ಬಿಜೆಪಿಯು ಪ್ರಾಮಾಣಿಕರಾಗಿ ಉಳಿದಿರುವ ಮತ್ತು ಬಿಜೆಪಿಯ ದ್ವೇಷ ಪ್ರಚಾರದ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ವರ್ಗಗಳನ್ನು ಗುರಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಖಾನ್ ಅತ್ಯಂತ ಹಿರಿಯ ಪತ್ರಕರ್ತರಾಗಿದ್ದು, ತನ್ನ ಕೆಲಸದ ಬಗ್ಗೆ ಅವರಿಗೆ ತಿಳಿದಿದೆ. ಅವರು ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.