ಉತ್ತರ ಪ್ರದೇಶ | ಮೃತದೇಹವನ್ನು ಅಮಾನವೀಯವಾಗಿ ಎಳೆದೊಯ್ದ ಆಂಬ್ಯುಲೆನ್ಸ್ ಚಾಲಕ; ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ | PC : PTI
ಲಕ್ನೋ: ಉತ್ತರ ಪ್ರದೇಶದ ಝಾನ್ಸಿ ಮೆಡಿಕಲ್ ಕಾಲೇಜು ಆವರಣದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಎಳೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊ ವೈರಲ್ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದ್ದು, ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಈ ಕುರಿತು ಖಾಸಗಿ ಆಂಬ್ಯುಲೆನ್ಸ್ ಚಾಲಕ ಶ್ಯಾಮಸುಂದರ್ ಶರ್ಮಾ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ನವಾಬಾದ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ ಐಆರ್ ದಾಖಲಾಗಿದೆ.
ಶ್ಯಾಮಸುಂದರ್ ಶರ್ಮಾ ಈ ಹಿಂದೆ ಕೂಡ ಇದೇ ರೀತಿ ಮಾಡಿದ್ದರು ಎಂದು ಹೇಳಲಾಗಿದೆ. ಈ ವಿಡಿಯೋ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಸುಧಾಕರ್ ಪಾಂಡೆ ಹೇಳಿದ್ದಾರೆ.
ಪಾಂಡೆ ಅವರ ದೂರಿನ ಆಧಾರದ ಮೇಲೆ ಶರ್ಮಾ ಮತ್ತು ಆತನ ಸಹಾಯಕನ ವಿರುದ್ಧ ಸೆಕ್ಷನ್ 301ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಗೋಪಿನಾಥ್ ಸೋನಿ ಹೇಳಿದ್ದಾರೆ.
ವೈದ್ಯಕೀಯ ಕಾಲೇಜಿನ ಅಧಿಕಾರಿಗಳ ಪ್ರಕಾರ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸುರಕ್ಷಿತವಾಗಿ ವರ್ಗಾಯಿಸಲು ಸರಿಯಾದ ವ್ಯವಸ್ಥೆ ಇದೆ. ಆದರೆ, ಚಾಲಕ ಸಮಯವನ್ನು ಉಳಿಸಲು ಮೃತದೇಹವನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗಿದ್ದಾನೆ.