ಮಹಾ ಕುಂಭಮೇಳದಿಂದ ಉತ್ತರ ಪ್ರದೇಶಕ್ಕೆ ಎರಡು ಲಕ್ಷ ಕೋಟಿ ರೂ.ಗಳ ಆದಾಯ ಸಾಧ್ಯತೆ
PC : PTI
ಪ್ರಯಾಗರಾಜ್: ಆಧ್ಯಾತ್ಮಿಕತೆ ಮತ್ತು ಜ್ಯೋತಿಷ್ಯ,ಸಂಸ್ಕೃತಿ ಮತ್ತು ಧರ್ಮ,ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನ ಇವೆಲ್ಲವೂ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಒಂದಾಗಿ ಬೆಸೆದುಕೊಂಡಿವೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದ 45 ದಿನಗಳ ಅವಧಿಯಲ್ಲಿ ವಿದೇಶಗಳಿಂದ ಸೇರಿದಂತೆ 40 ಕೋಟಿ ಗೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆಯಿದೆ.
ಮೇಳವು ಆಧ್ಯಾತ್ಮಿಕತೆಯ ಜೊತೆಗೆ ಉತ್ತರ ಪ್ರದೇಶ ಸರಕಾರದ ಬೊಕ್ಕಸಕ್ಕೆ ಎರಡು ಲಕ್ಷ ಕೋಟಿ ರೂ.ಗಳ ಬೃಹತ್ ಆದಾಯವನ್ನೂ ಒದಗಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಈ ಆಶಯವನ್ನು ವ್ಯಕ್ತಪಡಿಸಿದ್ದಾರೆ.
2019ರಲ್ಲಿ ನಡೆದಿದ್ದ ಅರ್ಧ ಕುಂಭಮೇಳದಲ್ಲಿ ಸುಮಾರು 24 ಕೋಟಿ ಜನರು ಪಾಲ್ಗೊಂಡಿದ್ದು, ರಾಜ್ಯದ ಬೊಕ್ಕಸಕ್ಕೆ 1.2 ಲಕ್ಷ ಕೋಟಿ ರೂ.ಗಳ ಆದಾಯ ಲಭಿಸಿತ್ತು ಎಂದು ಆದಿತ್ಯನಾಥ್ ರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
12 ವರ್ಷಗಳಿಗೊಮ್ಮೆ ಕುಂಭಮೇಳ ಮತ್ತು 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತವೆ.
2019ಕ್ಕೆ ಹೋಲಿಸಿದರೆ ಈ ಸಲ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುಕಡಿಮೆ ದ್ವಿಗುಣಗೊಳ್ಳುವ ನಿರೀಕ್ಷೆಯಿರುವುದರಿಂದ ಆದಿತ್ಯನಾಥ್ ರ ಅಂದಾಜು ಕೇವಲ ಊಹಾಪೋಹವಲ್ಲ ಎಂದು ಹೇಳಬಹುದಾಗಿದೆ.
ಐಎಎನ್ಎಸ್ ಸುದ್ದಿಸಂಸ್ಥೆಯು ಉದ್ಯಮದ ಅಂದಾಜುಗಳನ್ನು ಪರಿಗಣಿಸಿ ನಿರೀಕ್ಷಿತ 40 ಕೋಟಿ ಯಾತ್ರಿಗಳಲ್ಲಿ ಪ್ರತಿಯೊಬ್ಬರೂ ಕನಿಷ್ಠ 5,000 ರೂ.ವೆಚ್ಚ ಮಾಡಿದರೆ ಎರಡು ಕೋಟಿ ರೂ.ಆದಾಯ ಲಭಿಸುತ್ತದೆ. ಪ್ರತಿ ಯಾತ್ರಿಯು 10,000 ರೂ.ವೆಚ್ಚ ಮಾಡಿದರೆ ಉ.ಪ್ರ.ಸರಕಾರವು ನಾಲ್ಕು ಲಕ್ಷ ಕೋಟಿ ರೂ.ಗಳ ಆದಾಯವನ್ನು ಗಳಿಸಲಿದೆ ಎಂದು ಹೇಳಿದೆ.