ಮಹಾ ಕುಂಭಮೇಳದ ಬಗ್ಗೆ ಅಪಪ್ರಚಾರ ಆರೋಪ: 14 ʼಎಕ್ಸ್ʼ ಖಾತೆಗಳ ವಿರುದ್ಧ ಕ್ರಮ ಕೈಗೊಂಡ ಉತ್ತರ ಪ್ರದೇಶ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಲಕ್ನೊ: ಮಹಾ ಕುಂಭಮೇಳದ ಬಗ್ಗೆ ದಾರಿ ತಪ್ಪಿಸುವಂಥ ತುಣುಕುಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ 14 ಎಕ್ಸ್ ಖಾತೆಗಳನ್ನು ಗುರುತಿಸಿ, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರವಿವಾರ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ನಡೆಸಲಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ತೀವ್ರ ಪರಿಶೀಲನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರಿ ಪ್ರಕಟಣೆಯಲ್ಲಿ ಹೇಳಲಾಗಿದೆ.
“ರಾಜ್ಯ ಸರಕಾರವು ದಾರಿ ತಪ್ಪಿಸುವ ತುಣುಕುಗಳ ಹರಡುವಿಕೆಯನ್ನು ತಡೆಯಲು, ನಿರ್ದಿಷ್ಟವಾಗಿ ಮಹಾ ಕುಂಭಮೇಳದಂಥ ಬೃಹತ್ ಕಾರ್ಯಕ್ರಮಕ್ಕೆ ಸಂಬಂಧಿಸಿಂಥ ದಾರಿ ತಪ್ಪಿಸುವ ತುಣುಕುಗಳ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಮಿತವಾಗಿ ನಿಗಾ ಇಡುವ ಶಪಥ ಮಾಡಿತ್ತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಘಟನೆಯಲ್ಲಿ ಜಾರ್ಖಂಡ್ ನ ಧನ್ ಬಾದ್ ನಲ್ಲಿನ ಹಳೆಯ ವಿಡಿಯೊವನ್ನು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆ.
ಸದರಿ ವಿಡಿಯೊವು ಜನವರಿ 1, 2025ರಂದು ಜಾರ್ಖಂಡ್ ಪೊಲೀಸರು ನಡೆಸಿದ್ದ ಲಾಠಿ ಚಾರ್ಜ್ ತುಣುಕನ್ನು ಒಳಗೊಂಡಿದೆ. ಈ ತುಣುಕನ್ನು ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿರುವ ತಮ್ಮ ಸಂಬಂಧಿಗಳಿಗಾಗಿ ಹುಡುಕಾಡುತ್ತಿರುವ ಭಕ್ತರ ಮೇಲೆ ಉತ್ತರ ಪ್ರದೇಶ ಪೊಲೀಸರು ಅಮಾನುಷವಾಗಿ ನಡೆಸಿರುವ ಲಾಠಿ ಚಾರ್ಜ್ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆ.
“ತನಿಖೆಯ ನಂತರ, ಈ ವಿಡಿಯೊವು ಧನ್ ಬಾದ್ ದೇ ಹೊರತು ಪ್ರಯಾಗ್ ರಾಜ್ ದಲ್ಲ ಎಂಬುದು ಧೃಢವಾಗಿದೆ. ಕುಂಭ ಮೇಳ ಪೊಲೀಸರು ಕೂಡಾ ಈ ಆರೋಪವನ್ನು ಅಲ್ಲಗಳೆದಿದ್ದು, ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ವಿಡಿಯೊದ ನೈಜ ಮೂಲದ ಕುರಿತು ಸ್ಪಷ್ಟನೆ ನೀಡಿದ್ದಾರೆ” ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ತಪ್ಪು ಮಾಹಿತಿಗಳನ್ನು ಹರಡುವಂತಹ ಇಂತಹ ನಡೆಯನ್ನು ರಾಜ್ಯ ಸರಕಾರ ಮತ್ತು ಪೊಲೀಸ್ ಪಡೆಯ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ಸಾರ್ವಜನಿಕರ ನಡುವೆ ಅಶಾಂತಿಯನ್ನು ಬಿತ್ತುವ ಉದ್ದೇಶಪೂರ್ವಕ ಪ್ರಯತ್ನ ಎಂದು ಪರಿಗಣಿಸಲಾಗುವುದು” ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.