ಉತ್ತರ ಪ್ರದೇಶ | ಪಾಕ್ ಐಎಸ್ಐ ಏಜೆಂಟ್ಗಳ ನೇರ ಸಂಪರ್ಕದಲ್ಲಿದ್ದ ಬಂಧಿತ ಬಬ್ಬರ್ ಖಾಲ್ಸಾ ಭಯೋತ್ಪಾದಕ

ಬಬ್ಬರ್ ಖಾಲ್ಸಾ | PC : NDTV
ಲಕ್ನೋ: ಗುರುವಾರ ಬೆಳಗಿನ ಜಾವ ಉತ್ತರ ಪ್ರದೇಶ ವಿಶೇಷ ತನಿಖಾ ತಂಡ(ಸಿಟ್) ಮತ್ತು ಪಂಜಾಬ್ ಪೋಲಿಸರ ಬಲೆಗೆ ಬಿದ್ದಿರುವ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್(ಬಿಕೆಐ)ನ ಭಯೋತ್ಪಾದಕ ಪಾಕಿಸ್ತಾನದ ಐಎಸ್ಐ ಏಜೆಂಟ್ಗಳು ಮತ್ತು ಬಿಕೆಐನ ಜರ್ಮನಿ ಘಟಕದೊಂದಿಗೆ ಸಂಪರ್ಕದಲ್ಲಿದ್ದ. ಅಮೃತಸರ ನಿವಾಸಿಯಾದ ಲಾಜರ್ ಮಸಿಹ್ ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸಂಚು ನಡೆಸುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.
ಮಸಿಹ್ ಕಳೆದ ಸೆಪ್ಟಂಬರ್ನಲ್ಲಿ ಜೈಲಿನಿಂದ ಪರಾರಿಯಾಗಿದ್ದು, ಆಗಿನಿಂದಲೂ ತಲೆ ಮರೆಸಿಕೊಂಡಿದ್ದ.
ಕೊಖ್ರಾಜ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮಸಿಹ್ನನ್ನು ಬಂಧಿಸಲಾಗಿದೆ. ಲಭ್ಯ ಮಾಹಿತಿಯಂತೆ ಆತ ಜರ್ಮನಿಯಲ್ಲಿನ ಬಿಕೆಐ ಘಟಕದ ಮುಖ್ಯಸ್ಥ ಸ್ವರ್ಣ ಸಿಂಗ್ ಅಲಿಯಾಸ್ ಜೀವನ್ ಘೌಜಿಗಾಗಿ ಕೆಲಸ ಮಾಡುತ್ತಿದ್ದ ಮತ್ತು ಪಾಕಿಸ್ತಾನದ ಐಎಸ್ಐ ಏಜೆಂಟ್ಗಳೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಡಿಜಿಪಿ ಅಮಿತಾಬ್ ಯಶ್ ತಿಳಿಸಿದರು.
ಬಂಧಿತ ಮಸಿಹ್ ಬಳಿಯಲ್ಲಿದ್ದ ಸ್ಫೋಟಕಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಾಝಿಯಾಬಾದ್ ವಿಳಾಸದ ಆಧಾರ್ ಕಾರ್ಡ್ ಮತ್ತು ಸಿಮ್ ರಹಿತ ಮೊಬೈಲ್ನ್ನು ಆತ ಹೊಂದಿದ್ದ.
ಬಬ್ಬರ್ ಖಾಲ್ಸಾ ಖಾಲಿಸ್ಥಾನ ಸ್ಥಾಪನೆಗೆ ಕರೆ ನೀಡುತ್ತಿರುವ ಪ್ರತ್ಯೇಕತಾವಾದಿ ಸಂಘಟನೆಯಾಗಿದೆ. ಉತ್ತರ ಅಮೆರಿಕ ಮತ್ತು ಯುರೋಪ್ನಲ್ಲಿ ಸಕ್ರಿಯವಾಗಿರುವ ಗುಂಪನ್ನು ಭಾರತ ಸೇರಿದಂತೆ ಹಲವಾರು ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿವೆ.