ಉತ್ತರಪ್ರದೇಶ: ರಸ್ತೆ ತಡೆ ತೆರವುಗೊಳಿಸಲು ಆಗಮಿಸಿದ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿದ ಗುಂಪು
Photo: twitter//rohaan
ಲಕ್ನೊ: ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟ ಬಳಿಕ ಉದ್ರಿಕ್ತ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಈ ಸಂದರ್ಭ ರಸ್ತೆ ತಡೆ ತೆರವುಗೊಳಿಸಲು ಆಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಮ್ ಅವತಾರ್ ಹಾಗೂ ಅವರ ತಂಡದ ಮೇಲೆ ಗುಂಪೊಂದು ದಾಳಿ ನಡೆಸಿದೆ.
ಮೆಹೋಬಾದ ಪನ್ವಾರಿ ಪ್ರದೇಶದಲ್ಲಿ ಸಂಭವಿಸಿದ ಬಸ್ ಅಪಘಾತವೊಂದರಲ್ಲಿ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವು ಆತನ ಕುಟುಂಬ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ಆಘಾತ ಉಂಟು ಮಾಡಿತು. ಈ ಹಿನ್ನೆಲೆಯಲ್ಲಿ ಬಾಲಕನಿಗೆ ನ್ಯಾಯ ಒದಗಿಸುವಂತೆ ಹಾಗೂ ಆತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ರಸ್ತೆ ತಡೆ ತೆರವುಗೊಳಿಸಲು ಸಬ್ ಇನ್ಸ್ಪೆಕ್ಟರ್ ರಾಮ್ ಅವತಾರ್ ಹಾಗೂ ಅವರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಕೊಡಲಾಗಿತ್ತು. ಪೊಲೀಸರು ಆಗಮಿಸುತ್ತಿದ್ದಂತೆ ದೊಣ್ಣೆ ಹಿಡಿದುಕೊಂಡಿದ್ದ ಜನರು ಗುಂಪು ಅವರ ಮೇಲೆ ದಾಳಿಗೆ ಮುಂದಾಯಿತು.
ಈ ಸಂದರ್ಭ ಪೊಲೀಸ್ ತಂಡದ ಮೂವರು ಸದಸ್ಯರು ಪರಾರಿಯಾದರು. ರಾಮ್ ಅವತಾರ್ ಮಾತ್ರ ಉದ್ರಿಕ್ತ ಗುಂಪನ್ನು ಎದುರಿಸಿದರು. ವಿಷಯ ಅರಿತ ಕೂಡಲೇ ಉಪ ವಿಭಾಗೀಯ ದಂಡಾಧಿಕಾರಿ ಹಾಗೂ ಪೊಲೀಸ್ ಉಪ ಅಧೀಕ್ಷರು ಸ್ಥಳಕ್ಕೆ ಧಾವಿಸಿದರು. ಅವರ ಉಪಸ್ಥಿತಿಯಲ್ಲಿ ಜನರನ್ನು ಸಮಾಧಾನಪಡಿಸಲಾಯಿತು. ಅನಂತರ ಗಾಯಗೊಂಡಿದ್ದ ರಾಮ್ ಅವತಾರ್ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ದಾಳಿಯಲ್ಲಿ ಭಾಗಿಯಾದ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ವ್ಯಾನ್ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವ ಸಂದರ್ಭ ಪೊಲೀಸರ ರಿವಾಲ್ವರ್ ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ಪೊಲೀಸರು ಪೊಲೀಸ್ ಠಾಣೆಗೆ ಕೊಂಡೊಯ್ದರು. ಆರೋಪಿಗಳನ್ನು ಪರಶುರಾಮ ಹಾಗೂ ಮೋನು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಕಾನ್ಸ್ಟೆಬಲ್ ಹಾಗೂ ಓರ್ವ ಸಬ್ ಇನ್ಸ್ಪೆಕ್ಟರ್ಗೆ ಕೂಡ ಸಣ್ಣಪುಟ್ಟ ಗಾಯಗಳಾಗಿವೆ.