ಉತ್ತರಪ್ರದೇಶ ಉಪ ಚುನಾವಣೆ | ಶೇ. 30ಕ್ಕೂ ಅಧಿಕ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ; ಶೇ. 48 ಅಭ್ಯರ್ಥಿಗಳು ಕೋಟ್ಯಧಿಪತಿಗಳು
PC : PTI
ಲಕ್ನೋ : ಉತ್ತರಪ್ರದೇಶದಲ್ಲಿ ಬುಧವಾರ ನಡೆದ ವಿಧಾನ ಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಶೇ. 30ಕ್ಕಿಂತಲೂ ಅಧಿಕ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇ. 48 ಅಭ್ಯರ್ಥಿಗಳು ಕೋಟ್ಯಧಿಪತಿಗಳು.
ವಿಧಾನ ಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ 90 ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿವರಗಳನ್ನು ವಿಶ್ಲೇಷಣೆ ನಡೆಸಿದ ಬಳಿಕ ಸರಕಾರೇತರ ಸಂಸ್ಥೆ ಯುಪಿ ಇಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್)ನ ವರದಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವರದಿಯ ಪ್ರಕಾರ ವಿಶ್ಲೇಷಣೆಗೆ ಒಳಪಡಿಸಲಾದ 90 ಅಭ್ಯರ್ಥಿಗಳ ಪೈಕಿ 29 (ಶೇ. 32) ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಶೇ. 24 ಅಭ್ಯರ್ಥಿಗಳು (ಶೇ. 27) ತಮ್ಮ ವಿರುದ್ಧದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ವರದಿಯಲ್ಲಿ 25 ಪಕ್ಷೇತರ ಅಭ್ಯರ್ಥಿಗಳು ಅಲ್ಲದೆ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸೇರಿದ್ದಾರೆ.
ಹಣಕಾಸು ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ, 90 ಅಭ್ಯರ್ಥಿಗಳ ಪೈಕಿ 43 (ಶೇ. 48) ಕೋಟ್ಯಧಿಪತಿಗಳು. ಈ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 3.76 ಕೋಟಿ ರೂ. ಎಂದು ವರದಿ ತಿಳಿಸಿದೆ.
ಕಣದಲ್ಲಿರುವ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಶುಚಿಸ್ಮಿತಾ ಮೌರ್ಯ (ಮಾಝ್ವಾನ್). ಇವರ ಹೆಸರಿನಲ್ಲಿ 50 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಇದೆ. ಅನಂತರ ಸ್ಥಾನದಲ್ಲಿರುವರು 40 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಎಸ್ಪಿಯ ಸುಂಬುಲ್ ರಾಣಾ (ಮೀರಾಪುರ) ಹಾಗೂ 28 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಎಸ್ಪಿಯ ಸಿಂಗ್ ರಾಜಾ ಜಾಧವ್ (ಗಾಝಿಯಾಬಾದ್) ಎಂದು ಅದು ಹೇಳಿದೆ.
ಕಣದಲ್ಲಿರುವ ಮೂವರು ಅತಿ ಬಡವರು ಪಕ್ಷೇತರ ಅಭ್ಯರ್ಥಿಗಳು. ರೂಪೇಶ್ ಚಂದ್ರ (ಗಾಝಿಯಾಬಾದ್) ಅವರ ಒಟ್ಟು ಆಸ್ತಿ ಮೌಲ್ಯ 18,000. ಅವರ ಬಳಿಕ ಫೂಲ್ಪುರದಿಂದ ಸ್ಪರ್ಧಿಸಿರುವ ರೀತಾ ವಿಶ್ವಕರ್ಮ ಹಾಗೂ ಗಾಯತ್ರಿ ಅವರ ಆಸ್ತಿ ಮೌಲ್ಯ ತಲಾ 27,000 ರೂ. ಎಂದು ವರದಿ ಹೇಳಿದೆ.
ಶಿಕ್ಷಣದ ವಿಚಾರಕ್ಕೆ ಬಂದರೆ, 33 (ಶೇ. 37) ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿಯಿಂದ 12ನೇ ತರಗತಿ ನಡುವೆ ಘೋಷಿಸಿಕೊಂಡಿದ್ದಾರೆ. 49 (ಶೇ. 54) ಅಭ್ಯರ್ಥಿಗಳು ಪದವೀಧರರು ಅಥವಾ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರು. ಓರ್ವ ಅಭ್ಯರ್ಥಿ ಡಿಪ್ಲೊಮಾ ಪದವೀಧರ. ಐವರು ಅಭ್ಯರ್ಥಿಗಳು ತಾವು ಕೇವಲ ಸಾಕ್ಷರರು, ಇಬ್ಬರು ಅಭ್ಯರ್ಥಿಗಳು ತಾವು ಅನಕ್ಷರಸ್ಥರು ಎಂದು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ವಿಧಾನ ಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿಯ ನಾಲ್ಕನೇ ಮೂರು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಶೇ. 44 ಹಾಗೂ ಬಹುಜನ ಸಮಾಜ ಪಕ್ಷದ ಶೇ. 22 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.