ಉತ್ತರಪ್ರದೇಶ | ಹೋಳಿ ಹಬ್ಬದ ವೇಳೆ ಮುಸ್ಲಿಮರಿಗೆ ಮನೆಯಲ್ಲಿರುವಂತೆ ತಾಕೀತು ಮಾಡಿದ್ದ ಪೊಲೀಸ್ ಅಧಿಕಾರಿಗೆ ಕ್ಲೀನ್ ಚಿಟ್

ಅನುಜ್ ಚೌಧರಿ | PC: ANI
ಹೊಸದಿಲ್ಲಿ: ಹೋಳಿ ಮತ್ತು ಈದ್ ಆಚರಣೆಯ ಸಂದರ್ಭದಲ್ಲಿ ಮುಸ್ಲಿಮರಿಗೆ ಮನೆಯಲ್ಲಿರುವಂತೆ ತಾಕೀತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಸಂಭಾಲ್ ಸರ್ಕಲ್ ಆಫೀಸರ್ ಅನುಜ್ ಚೌಧರಿ ಅವರನ್ನು ದೋಷಮುಕ್ತಗೊಳಿಸಿದ್ದಾರೆ.
ದೂರುದಾರರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್, ಸರ್ಕಲ್ ಆಫೀಸರ್ ನಡೆಯು ಪೊಲೀಸ್ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶ ಕೇಡರ್ನ 1992ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಠಾಕೂರ್ ತನಿಖಾ ವರದಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ʼಸರ್ಕಲ್ ಆಫೀಸರ್ ಹೇಳಿಕೆ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಅದನ್ನು ಕಡೆಗಣಿಸಲಾಗಿದೆ. ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸ್ಪಷ್ಟ ಪುರಾವೆಗಳಿದ್ದರೂ ಪೊಲೀಸ್ ಅಧೀಕ್ಷಕರು ಕ್ಲೀನ್ ಚಿಟ್ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಈ ಹಿಂದೆ ಅನುಜ್ ಚೌಧರಿಯ ಹೇಳಿಕೆಗಳನ್ನು ಬೆಂಬಲಿಸಿದ್ದರು. ಡಿಜಿಪಿ ಅವರು ಚೌಧರಿಯನ್ನು ರಕ್ಷಿಸುತ್ತಿದ್ದಾರೆʼ ಎಂದು ಅಮಿತಾಭ್ ಠಾಕೂರ್ ಆರೋಪಿಸಿದ್ದಾರೆ.
ಎಪ್ರಿಲ್ 16ರಂದು ಎಸ್ಪಿ ಮನೋಜ್ ಕುಮಾರ್ ಅವಸ್ತಿ ಸಿದ್ಧಪಡಿಸಿದ ವರದಿಯು, ಠಾಕೂರ್ ದೂರು ನೀಡಿರುವಂತೆ ವಿಚಾರಣೆಯ ಸಮಯದಲ್ಲಿ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿತ್ತು.
ʼಹೋಳಿ ಹಬ್ಬ ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತದೆ. ಹೀಗಾಗಿ ಮುಸ್ಲಿಮರಿಗೆ ಹೋಳಿ ಬಣ್ಣಗಳು ಇಷ್ಟವಾಗದಿದ್ದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕುʼ ಎಂದು ಸಂಭಲ್ನ ಸರ್ಕಲ್ ಆಫೀಸರ್ ಅನುಜ್ ಕುಮಾರ್ ಚೌಧರಿ ಹೇಳಿದ್ದರು. ಪೊಲೀಸ್ ಅಧಿಕಾರಿಯ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.