14ನೇ ಶತಮಾನದ ಮಸೀದಿಯ ಸರ್ವೆಗೆ ಆದೇಶಿಸಲು ಉತ್ತರ ಪ್ರದೇಶ ನ್ಯಾಯಾಲಯದ ನಕಾರ
PC : Muslims of India \ Facebook
ಲಕ್ನೋ: ಉತ್ತರ ಪ್ರದೇಶದ ಜೌನಪುರ ನ್ಯಾಯಾಲಯವು ಆರಾಧನಾ ಸ್ಥಳಗಳ ಧಾರ್ಮಿಕ ಸ್ವರೂಪ ಕುರಿತು ಬಾಕಿಯುಳಿದಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಯಾವುದೇ ಆದೇಶಗಳನ್ನು ಹೊರಡಿಸುವುದನ್ನು ನಿರ್ಬಂಧಿಸಿರುವ ಸರ್ವೋಚ್ಚ ನ್ಯಾಯಾಲಯದ ಡಿ.12ರ ಮಧ್ಯಂತರ ನಿರ್ದೇಶನವನ್ನು ಉಲ್ಲೇಖಿಸಿ 14ನೇ ಶತಮಾನದ ಮಸೀದಿಯೊಂದರ ಸರ್ವೆಗೆ ಆದೇಶಿಸಲು ಸೋಮವಾರ ನಿರಾಕರಿಸಿದೆ.
ಸ್ವರಾಜ್ ವಾಹಿನಿ ಅಸೋಸಿಯೇಷನ್ ಎಂಬ ಹಿಂದುತ್ವ ಸಂಘಟನೆಯು ಜೌನಪುರದಲ್ಲಿಯ ಅಟಾಲಾ ಮಸೀದಿಯು ಮೂಲತಃ ದೇವಸ್ಥಾನವೆಂದು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು,14ನೇ ಶತಮಾನದ ಆಡಳಿತಗಾರ ಫಿರೋಜ್ ಶಾ ತುಘಲಕ್ ಭಾರತವನ್ನು ಆಕ್ರಮಿಸಿದ ಬಳಿಕ ದೇವಸ್ಥಾನವನ್ನು ಕೆಡವಲಾಗಿತ್ತು ಎಂದು ವಾದಿಸಿದೆ.
ಹಿಂದುಗಳಿಗೆ ಈ ಸ್ಥಳದಲ್ಲಿ ಪೂಜೆ ಸಲ್ಲಿಸುವ ಹಕ್ಕನ್ನು ನೀಡಬೇಕು ಮತ್ತು ಹಿಂದುಯೇತರರು ಆವರಣವನ್ನು ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ಸ್ವರಾಜ್ ವಾಹಿನಿ ಅಸೋಸಿಯೇಷನ್ ಆಗ್ರಹಿಸಿದೆ.
ಆರಾಧನಾ ಸ್ಥಳಗಳ ಧಾರ್ಮಿಕ ಸ್ವರೂಪ ಕುರಿತು ಬಾಕಿಯುಳಿದಿರುವ ಪ್ರಕರಣಗಳಲ್ಲಿ ಸರ್ವೆಗೆ ನಿರ್ದೇಶನಗಳು ಸೇರಿದಂತೆ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸದಂತೆ ಸರ್ವೋಚ್ಚ ನ್ಯಾಯಾಲಯವು ಡಿ.12ರ ತನ್ನ ಮಧ್ಯಂತರ ನಿರ್ದೇಶನದಲ್ಲಿ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ.
1991ರ ಪೂಜಾ ಸ್ಥಳಗಳ ಕಾಯ್ದೆ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮುಂದಿನ ವರ್ಷದ ಫೆಬ್ರವರಿಯಲ್ಲಿ ಮತ್ತೆ ವಿಚಾರಣೆಗೆತ್ತಿಕೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಜೌನಪುರ ನ್ಯಾಯಾಲಯವು ಅಟಾಲಾ ಮಸೀದಿ ಪ್ರಕರಣದ ಮುಂದಿನ ವಿಚಾರಣೆಯನ್ನು 2025,ಮಾ.2ರಂದು ನಿಗದಿಗೊಳಿಸಿದೆ.