ಉತ್ತರ ಪ್ರದೇಶ: ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ; ಇಬ್ಬರು ಗಂಭೀರ
ಸಾಂದರ್ಭಿಕ ಚಿತ್ರ
ಲಕ್ನೋ: ಬೀದಿನಾಯಿ ದಾಳಿಗೆ ನಾಲ್ಕು ವರ್ಷದ ಪುಟ್ಟ ಬಾಲಕಿ ಬಲಿಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಾಗ್ಲ ಮಹೇಶ್ವರಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಈ ಬಾಲಕಿಯ ಜತೆಗೂಡಿ ತಂದೆಗೆ ಕಬ್ಬಿನ ಗದ್ದೆಗೆ ಬುತ್ತಿ ಒಯ್ಯುತ್ತಿದ್ದ 5 ಹಾಗೂ 7 ವರ್ಷ ವಯಸ್ಸಿನ ಇನ್ನಿಬ್ಬರು ಬಾಲಕಿಯರ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ಹದಿನೈದು ತಿಂಗಳಲ್ಲಿ ಆರು ಮಕ್ಕಳು ಸೇರಿದಂತೆ ಇಂತಹ ಹತ್ತು ಸಾವು ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಂದೆಗೆ ಹೊಲಕ್ಕೆ ಆಹಾರ ಒಯ್ಯುವ ಸಂದರ್ಭದಲ್ಲಿ ಸುಮಾರು ಆರು ಬೀದಿ ನಾಯಿಗಳು ಇವರ ಮೇಲೆ ದಾಳಿ ಮಾಡಿದವು. ಕೂಡಲೇ ಅಕ್ಕಪಕ್ಕದ ರೈತರು ಮಕ್ಕಳ ನೆರವಿಗೆ ಬಂದರು ಎಂದು ಬಿಜ್ನೋರ್ ಎಸ್ಪಿ ನೀರಜ್ ಕುಮಾರ್ ಜದುವಾನ್ ಹೇಳಿದ್ದಾರೆ.
ಈ ಪೈಕಿ ಒಬ್ಬ ಬಾಲಕಿಯ ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ತಕ್ಷಣ ಒಯ್ಯಲಾಯಿತು. ಆದರೆ ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಅದೇ ಪ್ರದೇಶದ ಇತರ ಇಬ್ಬರು ಬಾಲಕಿಯರಿಗೆ ಮುಖ, ಕುತ್ತಿಗೆ ಹಾಗೂ ಮೊಣಕಾಲಿಗೆ ಗಾಯಗಳಾಗಿದ್ದು, ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಎಸ್ಪಿ ವಿವರ ನೀಡಿದ್ದಾರೆ.
ಪೋಷಕರು ಹೆಚ್ಚು ಜಾಗೃತೆ ವಹಿಸಬೇಕು ಮತ್ತು ಕಬ್ಬಿನ ಗದ್ದೆಗಳಿಗೆ ಮಕ್ಕಳು ಒಬ್ಬಂಟಿಯಾಗಿ ಹೋಗಲು ಅವಕಾಶ ನೀಡಬಾರದು ಎಂದು ಎಸ್ಪಿ ನೀರಜ್ ಕುಮಾರ್ ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಲಿದೆ. ಕಳೆದ ವರ್ಷ ಈ ಭಾಗದ 5000 ಮಂದಿಗೆ ರೇಬೀಸ್ ತಡೆ ಚುಚ್ಚುಮದ್ದು ನೀಡಲಾಗಿದೆ ಎಂದು ಬಿಜ್ನೋರ್ ಮುಖ್ಯ ಅಭಿವೃದ್ಧಿ ಅಧಿಕಾರಿ ಪೂರ್ಣಾ ಬೋರಾ ಹೇಳಿದ್ದಾರೆ.