ಉತ್ತರ ಪ್ರದೇಶ | ಮುಸ್ಲಿಂ ಕಾರ್ಮಿಕರನ್ನು ದೇವಾಲಯ ಕಾಮಗಾರಿ ಕೆಲಸ ಮಾಡದಂತೆ ತಡೆ

ಸಾಂದರ್ಭಿಕ ಚಿತ್ರ | PC : PTI
ಲಕ್ನೋ: ಉತ್ತರಪ್ರದೇಶದ ಹಾಥರಸ್ ನ ದೇವಾಲಯವೊಂದರಲ್ಲಿ ಇಬ್ಬರು ಮುಸ್ಲಿಂ ಕಾರ್ಮಿಕರನ್ನು ಕಟ್ಟಡ ನಿರ್ಮಾಣ ಕೆಲಸ ಮಾಡದಂತೆ ಕೇಸರಿ ಸಂಘಟನೆಯೊಂದರ ಕಾರ್ಯಕರ್ತರು ತಡೆದಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಕಾರಣವನ್ನು ಮುಂದಿಟ್ಟುಕೊಂಡು ಈ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಹಾಥರಸ್ ನ ಶ್ರೀಬಾಲ್ಕೇಶ್ವರ ಮಹಾದೇವ ದೇವಾಲಯದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಮುಸ್ಲಿಂ ಕಾರ್ಮಿಕನೊಬ್ಬನಿಗೆ, ವ್ಯಕ್ತಿಯೊಬ್ಬ ಹೇಳುತ್ತಿರುವ ದೃಶ್ಯವಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘‘ ಪಹಲ್ಗಾಮ್ ನಲ್ಲಿರುವ ಭಯೋತ್ಪಾದಕ ದಾಳಿಯಲ್ಲಿ ಹಿಂದೂಗಳನ್ನು ಗುರುತಿಸಿ, ಹತ್ಯೆಗೈಯಲಾಗಿದೆ. ಈ ಕಾರಣಕ್ಕಾಗಿ ನಾವು ನಿಮ್ಮನ್ನು ನಮ್ಮ ದೇವಾಲಯದಲ್ಲಿ ಕೆಲಸದಿಂದ ತೆಗೆದುಹಾಕುತ್ತಿದ್ದೇವೆ...’’ ಎಂಬಿತ್ಯಾದಿ ಮಾತುಗಳನ್ನು ಆ ವ್ಯಕ್ತಿಯು ಆಡುತ್ತಿರುವುದು ವೀಡಿಯೊದಲ್ಲಿ ಕೇಳಿಸಿದೆ.
ಆಗ ಕಾರ್ಮಿಕರು ಅದಕ್ಕೆ ಉತ್ತರಿಸುತ್ತಾ ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದಾಗ, ಆ ವ್ಯಕ್ತಿಯು ‘‘ ಧರ್ಮ? ಹಾಗಾದರೆ ಭಯೋತ್ಪಾದಕರೆಲ್ಲಾ ಯಾಕೆ ಮುಸ್ಲಿಮರಾಗಿರುತ್ತಾರೆ? ಯಾವುದೇ ಹಿಂದೂವು ಭಯೋತ್ಪಾದನೆಯ ಕೃತ್ಯವನ್ನು ಎಸಗಿದ್ದಾನೆಯೇ’’ ಎಂದು ಪ್ರಶ್ನಿಸುತ್ತಾನೆ.
ಈ ಇಬ್ಬರು ಮುಸ್ಲಿಂ ಕಾರ್ಮಿಕರ ವಿರುದ್ಧ ಆಕ್ಷೇಪಕಾರಿ ಮಾತುಗಳನ್ನಾಡಿದ ವ್ಯಕ್ತಿಯನ್ನು ಪ್ರಜಾತಾಂತ್ರಿಕ ಮಾನವೀಯ ಹಕ್ಕುಗಳ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ವಾರ್ಷ್ಣೆ ಎಂದು ಗುರುತಿಸಲಾಗಿದೆ. ಈ ಇಬ್ಬರು ಕಾರ್ಮಿಕರು ಕೆಲಸ ಮಾಡುವುದನ್ನು ನಿಲ್ಲಿಸಬೇಕೆಂದು ಆತ ಬೆದರಿಕೆ ಹಾಕಿದ್ದಾನೆಂದು ವರದಿಗಳು ತಿಳಿಸಿವೆ.