ಉತ್ತರಪ್ರದೇಶ: ಪಿಯುಸಿಎಲ್‌ನ ರಾಜ್ಯ ಮುಖ್ಯಸ್ಥನ ನಿವಾಸ ಸಹಿತ 8 ಸ್ಥಳಗಳ ಮೇಲೆ ಎನ್‌ಐಎ ದಾಳಿ
ಲಕ್ನೊ,: ನಿಷೇಧಿತ ಸಿಪಿಐ (ಮಾವೋವಾದಿ)ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಉತ್ತರಪ್ರದೇಶದ 8 ಸ್ಥಳಗಳಲ್ಲಿ ಎನ್‌ಐಎ ಮಂಗಳವಾರ ದಾಳಿ ನಡೆಸಿದೆ.
ಪ್ರಯಾಗ್‌ರಾಜ್, ವಾರಣಾಸಿ, ಚಾಂದೌಲಿ, ಆಝಮ್‌ಗಢ ಹಾಗೂ ದೆವಾರಿಯಾದಲ್ಲಿ ಎನ್‌ಐಎ ದಾಳಿ ನಡೆಸಿದೆ.
ಪ್ರಯಾಗ್‌ರಾಜ್‌ನಲ್ಲಿ ಮಾನವ ಹಕ್ಕುಗಳ ಸಂಘಟನೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್‌ನ ಉತ್ತರಪ್ರದೇಶ ಘಟಕದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಸೀಮಾ ಅಝಾದ್‌ಗೆ ಸೇರಿದ ಸ್ಥಳಗಳು ಕೂಡ ಎನ್‌ಐಎ ದಾಳಿ ನಡೆಸಿದ ಸ್ಥಳಗಳಲ್ಲಿ ಸೇರಿವೆ.
ಅಝಾದ್ ಹಾಗೂ ಅವರ ಪತಿ, ನ್ಯಾಯವಾದಿ ವಿಶ್ವ ವಿಜಯ್ ಅವರನ್ನು ಎನ್‌ಐಎ ವಿಚಾರಣೆ ನಡೆಸಿದೆ ಎಂದು ಪಿಯುಸಿಎಲ್ ಹೇಳಿದೆ.
ಎನ್‌ಐಎ ಅವರ ಮನೆಗಳಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಪುಸ್ತಕಗಳನ್ನು ವಶಪಡಿಸಿಕೊಂಡಿದೆ ಎಂದು ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್ ವರದಿ ಮಾಡಿದೆ. ದಾಳಿಯ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಲು ಪ್ರಯತ್ನಿಸಿದ ವಿಶ್ವ ವಿಜಯ್ ಅವರಿಗೆ ಪೊಲೀಸರು ತಡೆ ಒಡಿದ್ದಾರೆ.
ತನ್ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉತ್ತರಪ್ರದೇಶದ ಅಧ್ಯಕ್ಷೆ, ನ್ಯಾಯವಾದಿ, ವಾಣಿಜ್ಯೇತರ ತಿಂಗಳ ಮ್ಯಾಗಝಿನ್ ದಸ್ತಕ್‌ನ ಸಂಪಾದಕಿ ಸೀಮಾ ಆಝಾದ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವುದಕ್ಕೆ ಪಿಯುಸಿಎಲ್ ಆಕ್ರೋಶ ವ್ಯಕ್ತಪಡಿಸಿದೆ. ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಪ್ರತಿಪಾದಕರ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನ ಇದಾಗಿದೆ ಎಂದು ಅದು ಹೇಳಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳ ಸಂಘಟನೆ ಭಗತ್ ಸಿಂಗ್ ಸೂಡೆಂಟ್ಸ್ ಮೋರ್ಚಾದ ಕಚೇರಿ ಮೇಲೆ ಕೂಡ ಎನ್‌ಐಎ ದಾಳಿ ನಡೆಸಿದೆ. ಸಂಘಟನೆಯ ಅಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿಯನ್ನು ವಿಚಾರಣೆಗೆ ಒಳಪಡಿಸಿದೆ. ಅವರ ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು 40 ನಾಗರಿಕ ಹಕ್ಕುಗಳ ಗುಂಪುಗಳ ಜಂಟಿ ತಂಡ ಕ್ಯಾಂಪೇನ್ ಎಗೈನ್ಸ್‌ಟ್ ಸ್ಟೇಟ್ ರಿಪ್ರೆಷನ್ ಹೇಳಿದೆ.
ಎನ್‌ಐಐ ಕಾರ್ಮಿಕರ ಗುಂಪಿನ ಸಂಚಾಲಕ ರಿತೇಶ್ ವಿದ್ಯಾರ್ಥಿ ಹಾಗೂ ರಾಜಕೀಯ ಹೋರಾಟಗಾರ ಮನೀಷ್ ಅಝಾದ್ ಅವರ ಮನೆಯ ಮೇಲೆ ಕೂಡ ಎನ್‌ಐಎ ದಾಳಿ ನಡೆಸಿದೆ ಎಂದು ಪಿಯುಸಿಎಲ್ ಪ್ರಯಾಗ್‌ರಾಜ್‌ನಲ್ಲಿ ಹೇಳಿದೆ.