ಉತ್ತರಪ್ರದೇಶ | ಚಲಿಸುತ್ತಿದ್ದ ಬಸ್ ನಿಂದ ಪಾನ್ ಉಗಿಯಲು ಹೋಗಿ, ಆಯ ತಪ್ಪಿ ಕೆಳಗೆ ಬಿದ್ದ ಪ್ರಯಾಣಿಕ ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಸುಲ್ತಾನ್ ಪುರ್: ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ಬಸ್ ನಲ್ಲಿ ತೆರಳುತ್ತಿದ್ದ 45 ವರ್ಷದ ಪ್ರಯಾಣಿಕರೊಬ್ಬರು, ತಮ್ಮ ಬಾಯಿಯಲ್ಲಿದ್ದ ಪಾನ್ ಅನ್ನು ಬಸ್ ಬಾಗಿಲು ತೆರೆದು ಹೊರಗೆ ಉಗಿಯುವ ಪ್ರಯತ್ನದಲ್ಲಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಲಕ್ನೊದಲ್ಲಿನ ಚಿನ್ಹಾಟ್ ಪ್ರದೇಶದ ನಿವಾಸಿ ರಾಮ್ ಜಿಯಾವನ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಅವರ ಪತ್ನಿ ಸಾವಿತ್ರಿ ಕೂಡಾ ಅವರೊಂದಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯು ಶನಿವಾರ ಬೆಳಗ್ಗೆ ಸುಮಾರು 10.30 ಗಂಟೆಗೆ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಯ 93 ಕಿಮೀ ಮೈಲಿಗಲ್ಲಿನ ಬಳಿ ನಡೆದಿದ್ದು, ಬಸ್ ಅಝಂಗಢದಿಂದ ಲಕ್ನೊಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
“ಬಲ್ದಿರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಿ ಗ್ರಾಮವನ್ನು ಬಸ್ ಸಮೀಪಿಸಿದಾಗ, ಮೃತ ಪ್ರಯಾಣಿಕ ತಮ್ಮ ಬಾಯಲ್ಲಿದ್ದ ಪಾನ್ ಅನ್ನು ಹೊರಗೆ ಉಗುಳಲು ಚಲಿಸುತ್ತಿದ್ದ ಬಸ್ ನ ಬಾಗಿಲು ತೆರೆದಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ತಮ್ಮ ನಿಯಂತ್ರಣ ಕಳೆದುಕೊಂಡಿರುವ ಅವರು, ರಸ್ತೆಗೆ ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ”, ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಗೊಂಡಿದ್ದ ಪ್ರಯಾಣಿಕನನ್ನು ಆ್ಯಂಬುಲೆನ್ಸ್ ನಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಬಸ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಬಲ್ದಿರಾಯ್ ಠಾಣಾಧಿಕಾರಿ ಧೀರಜ್ ಕುಮಾರ್ ತಿಳಿಸಿದ್ದಾರೆ.