ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮುಂಚೂಣಿಯಲ್ಲಿ: ವರದಿ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: 2022ರಲ್ಲಿ 13 ರಾಜ್ಯಗಳಿಂದ ವರದಿಯಾಗಿರುವ ದಲಿತರ ಮೇಲಿನ ದೌರ್ಜನ್ಯದ ಒಟ್ಟು ಪ್ರಕರಣಗಳ ಶೇ. 97.7ರ ಪೈಕಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದಲೇ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಸರಕಾರಿ ವರದಿಯಲ್ಲಿ ಹೇಳಲಾಗಿದೆ.
ಇತ್ತೀಚಿನ ಸರಕಾರಿ ವರದಿಯ ಪ್ರಕಾರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಶಿಷ್ಟ ಪಂಗಡಗಳ ಮೇಲೆ ನಡೆದಿರುವ ದೌರ್ಜನ್ಯಗಳೂ ಕೂಡಾ ಈ 13 ರಾಜ್ಯಗಳಲ್ಲೇ ಕೇಂದ್ರೀಕೃತವಾಗಿದ್ದು, 2022ರ ಒಟ್ಟು ಪ್ರಕರಣಗಳ ಶೇ. 98.91ರಷ್ಟು ಪ್ರಕರಣಗಳು ಈ ರಾಜ್ಯಗಳಿಂದಲೇ ವರದಿಯಾಗಿವೆ.
2022ರಲ್ಲಿ ಪರಿಶಿಷ್ಟ ಜಾತಿ ದೌಜ್ಯನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ 51,656 ಪ್ರಕರಣಗಳ ಪೈಕಿ, ಉತ್ತರ ಪ್ರದೇಶದಲ್ಲಿ ಶೇ. 23.78 ಪ್ರಕರಣಗಳು ದಾಖಲಾಗಿದ್ದು,ಪ್ರಕರಣಗಳ ಒಟ್ಟು ಸಂಖ್ಯೆ 12,287 ಆಗಿದೆ. ರಾಜಸ್ಥಾನದಲ್ಲಿ ಶೇ. 16.75 ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಒಟ್ಟು ಸಂಖ್ಯೆ 8,651 ಆಗಿದೆ. ಮಧ್ಯಪ್ರದೇಶದಲ್ಲಿ ಶೇ. 14.97 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 7,732 ಆಗಿದೆ.
ಪರಿಶಿಷ್ಟ ಜಾತಿಗಳ ವಿರುದ್ಧ ಗಮನಾರ್ಹ ದೌರ್ಜನ್ಯ ನಡೆದಿರುವ ಇನ್ನಿತರ ರಾಜ್ಯಗಳ ಪೈಕಿ ಬಿಹಾರದಲ್ಲಿ 6,799 (ಶೇ. 13.16), ಒಡಿಶಾದಲ್ಲಿ 3,576 (6.93) ಹಾಗೂ ಮಹಾರಾಷ್ಟ್ರದಲ್ಲಿ 2,706 (ಶೇ. 5.24) ಪ್ರಕರಣಗಳು ದಾಖಲಾಗಿವೆ.
ಒಟ್ಟು ದಾಖಲಾಗಿರುವ ಪ್ರಕರಣಗಳ ಪೈಕಿ ಶೇ. 81ರಷ್ಟು ಪ್ರಕರಣಗಳು ಈ ಆರು ರಾಜ್ಯಗಳಲ್ಲೇ ದಾಖಲಾಗಿವೆ.