ಕಸ್ಟಡಿ ಸಾವುಗಳಲ್ಲಿ ಉತ್ತರ ಪ್ರದೇಶಕ್ಕೆ ಅಗ್ರಸ್ಥಾನ: ಎಲ್ಲ ಪ್ರಕರಣಗಳ ತನಿಖೆಯಾಗಬೇಕು ಎಂದ ಕಾಂಗ್ರೆಸ್
ಪಂಖುರಿ ಪಾಠಕ್| Photo: ANI
ಲಕ್ನೋ: ರಾಜ್ಯದಲ್ಲಿ ಪೋಲಿಸ್ ಕಸ್ಟಡಿಯಲ್ಲಿ ನಡೆದಿರುವ ಪ್ರತಿ ಸಾವಿನ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಶುಕ್ರವಾರ ಪ್ರತಿಪಾದಿಸಿರುವ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕಿ ಪಂಖುರಿ ಪಾಠಕ್ ಅವರು, ರಾಜ್ಯ ಸರಕಾರ ಮತ್ತು ಪೋಲಿಸ್ ಆಡಳಿತ ಇಷ್ಟೊಂದು ಅನಿಯಂತ್ರಿತವಾಗಿರುವುದು ಅತ್ಯಂತ ಕಳವಳಕಾರಿ ಮತ್ತು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆಯೂ ಆಗಿರುವ ಪಾಠಕ್, ದೇಶದಲ್ಲಿ ಕಸ್ಟಡಿ ಸಾವುಗಳಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ ಎಂದೂ ಪ್ರತಿಪಾದಿಸಿದ್ದಾರೆ.
ಬಂಧನದಲ್ಲಿದ್ದ ಗ್ಯಾಂಗ್ಸ್ಟರ್ ಪರಿವರ್ತಿತ ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ರಾಜ್ಯದ ಬಂಡಾ ಜಿಲ್ಲೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಾಠಕ್ ಹೇಳಿಕೆ ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ಪ್ರತಿದಿನ ಪೋಲಿಸ್ ಕಸ್ಟಡಿಯಲ್ಲಿ ಸಾವುಗಳು/ಹತ್ಯೆಗಳು ವರದಿಯಾಗುತ್ತಿವೆ. ಈ ವಿಷಯದಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ಎಲ್ಲ ಭಾಗಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ. ಹೀಗೆ ಸತ್ತವರಲ್ಲಿ ದಲಿತರು, ಮುಸ್ಲಿಮರು, ವ್ಯಾಪಾರಿಗಳು, ಬ್ರಾಹ್ಮಣರು, ಹಿಂದುಳಿದ ವರ್ಗಗಳ ಮತ್ತು ಪ್ರತಿಯೊಂದು ಜಾತಿಯ ಜನರು ಸೇರಿದ್ದಾರೆ. ಪೋಲಿಸ್ ಕಸ್ಟಡಿಯಲ್ಲಿ ಸಂಭವಿಸುವ ಪ್ರತಿ ಸಾವಿನ ಬಗ್ಗೆಯೂ ನ್ಯಾಯಾಂಗ ವಿಚಾರಣೆ ನಡೆಯಬೇಕು ಎಂದು ಪಾಠಕ್ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.