ಉತ್ತರ ಪ್ರದೇಶ | ಯುವಕನಿಗೆ ಥಳಿಸಿ, ವಿವಸ್ತ್ರಗೊಳಿಸಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತ: ಕುಟುಂಬ ಆರೋಪ
ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಮೀರತ್ನಲ್ಲಿ ಯುವಕನೋರ್ವನಿಗೆ ಥಳಿಸಿ, ವಿವಸ್ತ್ರಗೊಳಿಸಿ, ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತಪಡಿಸಲಾಗಿದೆ ಎಂದು ಆತನ ಕುಟುಂಬ ಸೋಮವಾರ ಆರೋಪಿಸಿದೆ.
ಆದರೆ, ಆರೋಪಿಗಳು ಆತನನ್ನು ವಿವಸ್ತ್ರಗೊಳಿಸಿದ್ದಾರೆ ಹಾಗೂ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದಾರೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಅಲ್ಲದೆ, ಮೇಲ್ನೋಟಕ್ಕೆ ಇದು ದ್ವೇಷದ ಪ್ರಕರಣದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಪಲ್ಲವಪುರಂನ ಸೋಫಿಪುರ ಗ್ರಾಮದ ನಿವಾಸಿಯಾಗಿರುವ ಗುಲ್ಫಾಮ್ ಮಂಗಳಪಾಂಡೆ ನಗರದಲ್ಲಿರುವ ಖಾಸಗಿ ಶೂಟಿಂಗ್ ವಲಯದಲ್ಲಿ ಅಭ್ಯಾಸ ನಡೆಸಿ ಮನೆಗೆ ಹಿಂದಿರುಗುತ್ತಿದ್ದಾಗ ಮೀರತ್ನಲ್ಲಿ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ ಎಂದು ಆತನ ತಂದೆ ಅಫ್ತಾಬ್ ತಿಳಿಸಿದ್ದಾರೆ.
ಗುಲ್ಫಾಮ್ನನ್ನು ಮೂವರು ಯುವಕರು ಬೈಕ್ನಲ್ಲಿ ವಿಕ್ಟೋರಿಯಾ ಪಾರ್ಕ್ಗೆ ಕರೆದೊಯ್ದರು. ಅಲ್ಲಿ ಆತನಿಗೆ ಥಳಿಸಿದರು, ವಿವಸ್ತ್ರಗೊಳಿಸಿದರು ಹಾಗೂ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತ ಪಡಿಸಿದರು. ಆತನ ಮೊಬೈಲ್ ಅನ್ನು ಕೂಡ ಕಿತ್ತುಕೊಂಡರು ಎಂದು ಅಫ್ತಾಬ್ ಆರೋಪಿಸಿದ್ದಾರೆ.
ಆರೋಪಿಗಳು ಥಳಿಸಿದ ಹಾಗೂ ವಿವಸ್ತ್ರಗೊಳಿಸಿದ ಬಳಿಕ ಆತ ಪ್ರಜ್ಞೆ ಕಳೆದುಕೊಂಡ ಎಂದು ಗುಲ್ಫಾಮ್ನ ಕುಟುಂಬದ ಸದಸ್ಯರು ಪ್ರತಿಪಾದಿಸಿದ್ದಾರೆ.
‘‘ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಸಂತ್ರಸ್ತನನ್ನು ಬಲವಂತಪಡಿಸಿರುವುದು ಎಫ್ಐಆರ್ನಲ್ಲಿ ಉಲ್ಲೇಖಿಸಿಲ್ಲ. ಮೇಲ್ನೋಟಕ್ಕೆ ಇದು ಇಬ್ಬರು ಯುವಕರ ನಡುವಿನ ದ್ವೇಷ ಪ್ರಕರಣದಂತೆ ಕಾಣುತ್ತದೆ’’ ಎಂದು ಸಿವಿಲ್ ಲೈನ್ನ ಎಸ್ಎಚ್ಒ ಮಹಾವೀರ್ ಸಿಂಗ್ ಹೇಳಿದ್ದಾರೆ.
ಅಫ್ತಾಬ್ ಅವರ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮಹಾವೀರ್ ಸಿಂಗ್ ತಿಳಿಸಿದ್ದಾರೆ.
ಗುಲ್ಫಾಮ್ ಪ್ರಸಕ್ತ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ ಎಂದು ಆತನ ಕುಟುಂಬ ತಿಳಿಸಿದೆ.