ಉತ್ತರಾಖಂಡ | ಮೃತ ಸಹ ಕಾರ್ಮಿಕನ ಪಕ್ಕ ಪ್ರಜ್ಞೆಗೆ ಮರಳಿದ್ದೆ: ಹಿಮಪಾತದ ಭಯಾನಕ ಅನುಭವ ಬಿಚ್ಚಿಟ್ಟ ಬದುಕುಳಿದ ಕಾರ್ಮಿಕ

PC : PTI
ಡೆಹ್ರಾಡೂನ್: ನನ್ನನ್ನು ಸುತ್ತವರಿದಿದ್ದ ಭಾರಿ ಹಿಮದ ನಡುವೆ, ಮೃತ ಸಹ ಕಾರ್ಮಿಕನ ಪಕ್ಕ ನಾನು ಪ್ರಜ್ಞೆಗೆ ಮರಳಿದ್ದೆ ಎಂದು ಶುಕ್ರವಾರ ಸಂಭವಿಸಿದ್ದ ಭಾರಿ ಹಿಮಪಾತದಲ್ಲಿ ಬದುಕುಳಿದಿರುವ ಬಿಆರ್ಒ ಕಾರ್ಮಿಕ ಜಗ್ಬೀರ್ ಸಿಂಗ್ ಹಿಮಪಾತದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯಲ್ಲಿ ಅವರ ಕಾಲಿನ ಮೂಳೆ ಮುರಿದಿದ್ದು, ತಲೆಗೂ ಗಾಯಗಳಾಗಿವೆ.
ಶುಕ್ರವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯ ಅತಿ ಎತ್ತರ ಪ್ರದೇಶದಲ್ಲಿರುವ ಮನ ಗ್ರಾಮದಲ್ಲಿ ಹಿಮಪಾತ ಸಂಭವಿಸಿದ ನಂತರ, ಸ್ವಲ್ಪ ದೂರದಲ್ಲಿ ಕಂಡು ಬಂದಿದ್ದ ಹೋಟೆಲ್ ಒಂದರಲ್ಲಿ ಜಗ್ಬೀರ್ ಸಿಂಗ್ ಆಶ್ರಯ ಪಡೆದಿದ್ದರು. ಸುಮಾರು 25 ಗಂಟೆಗಳ ಕಾಲ ಭಯಾನಕ ಸನ್ನಿವೇಶದಲ್ಲಿ ಸಿಲುಕಿಕೊಂಡಿದ್ದ ಅವರು, ತಮಗೆ ಬಾಯಾರಿಕೆಯಾದಾಗ ಮಂಜಿನ ಗಡ್ಡೆಗಳನ್ನು ಸೇವಿಸಿದ್ದರು. ತಮ್ಮ ಹತ್ತಕ್ಕೂ ಹೆಚ್ಚು ಸಹೋದ್ಯೋಗಿಗಳೊಂದಿಗೆ ಒಂದೇ ಸಾಮಾನ್ಯ ಕಂಬಳಿಯನ್ನು ಹಂಚಿಕೊಂಡು ಮೈಕೊರೆಯುವ ಚಳಿಯ ವಿರುದ್ಧ ಹೋರಾಟ ನಡೆಸಿದ್ದರು.
ಹಿಮಪಾತ ಸಂಭವಿಸಿದಾಗ ನಾನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಶಿಬಿರದ ಕಂಟೈನರ್ ನಲ್ಲಿ ನಿದ್ರಿಸುತ್ತಿದ್ದೆ ಹಾಗೂ ಹಿಮಪಾತದಿಂದ ನಾವು ನೂರಾರು ಅಡಿ ಕೆಳಕ್ಕೆ ಉರುಳಿದೆವು ಎಂದು ಅಮೃತಸರ ನಿವಾಸಿಯಾದ ಜಗ್ಬೀರ್ ಸಿಂಗ್ ಹೇಳುತ್ತಾರೆ.
“ನಾವಿದ್ದ ಕಂಟೈನರ್ ಕೆಳಕ್ಕೆ ಉರುಳಲು ಪ್ರಾರಂಭಿಸಿತು. ಏನಾಯಿತು ಎಂದು ನಮಗೆ ತಿಳಿಯುವ ಹೊತ್ತಿಗೆ, ನನ್ನ ಸಹೋದ್ಯೋಗಿಯೊಬ್ಬ ಮೃತಪಟ್ಟಿದ್ದ ಹಾಗೂ ನನ್ನ ಒಂದು ಕಾಲು ಮುರಿದಿತ್ತು. ನನ್ನ ತಲೆಗೂ ಗಾಯವಾಯಿತು. ಅಲ್ಲಿ ಎಲ್ಲ ಕಡೆಯೂ ಮಂಜಿನ ರಾಶಿಯೇ ನಿರ್ಮಾಣವಾಗಿತ್ತು” ಎಂದು ಅವರು ನೆನಪಿಸಿಕೊಂಡಿದ್ದಾರೆ.
ನಂತರ ನಾವೆಲ್ಲ ಹೇಗೋ ಸ್ವಲ್ಪವೇ ದೂರದಲ್ಲಿದ್ದ ಹೋಟೆಲ್ ಗೆ ತಲುಪಿ, ಅಲ್ಲಿ ಆಶ್ರಯ ಪಡೆದೆವು. 25 ಗಂಟೆಗಳ ನಂತರ ನಮ್ಮನ್ನು ರಕ್ಷಿಸಲಾಯಿತು. ಈ ಅವಧಿಯಲ್ಲಿ 14-15 ಮಂದಿ ಇದ್ದ ನಮ್ಮ ಬಳಿ ಹೊದ್ದುಕೊಳ್ಳಲು ಕೇವಲ ಒಂದು ಕಂಬಳಿ ಮಾತ್ರವಿತ್ತು. ನಮಗೆ ಬಾಯಾರಿಕೆಯಾದಾಗ ನಾವು ಮಂಜು ಗಡ್ಡೆ ಸೇವಿಸಿದ್ದೆವು” ಎಂದು ಅವರು ತಮ್ಮ ಹಿಮಪಾತದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ಸಂಭವಿಸಿದ್ದ ಹಿಮಪಾತದ ಕಾರಣಕ್ಕೆ ಕಂಟೈನರ್ ಒಳಗಿದ್ದ ಎಲ್ಲ 54 ಬಿಆರ್ಒ ಕಾರ್ಮಿಕರು ರಾತ್ರಿಯೆಲ್ಲ ಅದರೊಳಗೆ ಸಿಲುಕಿಕೊಂಡಿದ್ದರು. ಈ ಪೈಕಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಗಾಯಗೊಂಡಿರುವ 46 ಕಾರ್ಮಿಕರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ನಾಪತ್ತೆಯಾಗಿರುವ ಮತ್ತೊಬ್ಬ ಕಾರ್ಮಿಕನನ್ನು ಪತ್ತೆ ಹಚ್ಚುವ ಪ್ರಯತ್ನಗಳು ಪ್ರಗತಿಯಲ್ಲಿವೆ.