ಇಂದು ಮುಂಬೈಯಲ್ಲಿ ಉದ್ಯಮ ಸಮೂಹಗಳೊಂದಿಗೆ ಉತ್ತರಾಖಂಡ ಸಿಎಂ ಧಾಮಿ ಸಭೆ
Photo: twitter/@pushkardhami
ಮುಂಬೈ : ನವೆಂಬರ್ 8 ಹಾಗೂ 9ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗ ಸಭೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಸೋಮವಾರ ನಡೆಯಲಿರುವ ರೋಡ್ಶೋನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ಧಾಮಿ ಅವರು ಉತ್ತರಾಖಂಡದಲ್ಲಿ ಹೂಡಿಕೆಗೆ ಸಂಬಂಧಿಸಿ ಮುಂಬೈಯ ಹಲವು ಉದ್ಯಮ ಸಮೂಹವನ್ನು ಭೇಟಿಯಾಗಲಿದ್ದಾರೆ. ರಾಜ್ಯ ಸರಕಾರ 4 ಅಂತರ ರಾಷ್ಟ್ರೀಯ ರೋಡ್ ಶೋ ಸೇರಿದಂತೆ ಒಟ್ಟು 8 ರೋಡ್ ಶೋಗಳನ್ನು ಆಯೋಜಿಸಿದೆ. 94,000 ಕೋ.ರೂ.ಗೂ ಅಧಿಕ ಮೌಲ್ಯದ ಹೂಡಿಕೆಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ಡಿಸೆಂಬರ್ ಒಳಗೆ ರಾಜ್ಯದಲ್ಲಿ ಹೆಚ್ಚು ಹೆಚ್ಚು ತಿಳುವಳಿಕಾ ಒಪ್ಪಂದವನ್ನು ಅನುಷ್ಠಾನಗೊಳಿಸಲು ಕಾರ್ಯಾರಂಭಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಧಾಮಿ ಅವರ ಸೂಚನೆಯಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇದುವರೆಗೆ ರಾಜ್ಯ ಸರಕಾರ ಸಹಿ ಹಾಕಿದ ಹೂಡಿಕೆ ತಿಳುವಳಿಕಾ ಒಪ್ಪಂದದಲ್ಲಿ ಪ್ರವಾಸ, ಆತಿಥ್ಯ ವಲಯ, ಆಯುಷ್, ಕ್ಷೇಮ ವಲಯ, ಉತ್ಪಾದನಾ ವಲಯ, ಔಷಧ ವಲಯ, ಆಹಾರ ಸಂಸ್ಕರಣೆ, ರಿಯಲ್ ಎಸ್ಟೇಟ್-ಇನ್ಫ್ರಾ, ದಾಸ್ತಾನು ವಲಯ, ಹಸಿರು ಹಾಗೂ ನವೀಕರಿಸಬಹುದಾದ ಇಂಧನ, ಆಟೊಮೊಬೈಲ್ ವಲಯ ಸೇರಿದೆ.
ಧಾಮಿ ಅವರ ನಾಯಕತ್ವದಲ್ಲಿ ಇದುವರೆಗೆ ವಿದೇಶದಲ್ಲಿ ಲಂಡನ್, ಬರ್ಮಿಂಗ್ಹ್ಯಾಮ್, ಅಬುಧಾಬಿ, ದುಬೈಯಲ್ಲಿ ನಾಲ್ಕು ಅಂತಾರಾಷ್ಟ್ರೀಯ ರೋಡ್ ಶೋಗಳನ್ನು ಆಯೋಜಿಸಿದೆ. ದೇಶದಲ್ಲಿ ದಿಲ್ಲಿ, ಚೆನ್ನೈ, ಬೆಂಗಳೂರು, ಅಹ್ಮದಾಬಾದ್ನಲ್ಲಿ ರೋಡ್ ಶೋಗಳನ್ನು ನಡೆಸಿದೆ.
ಧಾಮಿ ಅವರ ಸರಕಾರ 26,575 ಕೋ. ರೂ. ಹೂಡಿಕೆಗೆ ದಿಲ್ಲಿಯಲ್ಲಿ ಸೆ.14 ಹಾಗೂ ಅ.4ರಂದು, 12,500 ಕೋ.ರೂ. ಹೂಡಿಕೆಗೆ ಇಂಗ್ಲೆಂಡ್ನಲ್ಲಿ ಸೆ.26 ಹಾಗೂ 27ರಂದು, 15,475 ಕೋ.ರೂ. ಹೂಡಿಕೆಗೆ ಯುಎಇಯಲ್ಲಿ ಅ.17 ಹಾಗೂ 18ರಂದು, ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ. ಇದಲ್ಲದೆ, 10,150 ಕೋ.ರೂ. ಹೂಡಿಕೆಗೆ ಚೆನ್ನೈಯಲ್ಲಿ ಅ.26ರಂದು, 4,600 ಕೋ.ರೂ ಹೂಡಿಕೆಗೆ ಬೆಂಗಳೂರಿನಲ್ಲಿ ಅ.28 ರಂದು ಹಾಗೂ 24,000 ಕೋ.ರೂ. ಹೂಡಿಕೆಗೆ ಅಹ್ಮದಾಬಾದ್ನಲ್ಲಿ ನ.1ರಂದು ಸಹಿ ಹಾಕಿದೆ.
ಧಾಮಿ ಅವರು ರಾಜ್ಯದಲ್ಲಿ ಹಸಿರು ಆರ್ಥಿಕತೆಗೆ ವಿಶೇಷ ಗಮನ ನೀಡುತ್ತಿದ್ದಾರೆ. ಅವರು ಈ ವಿಷಯಕ್ಕೆ ಸಂಬಂಧಿಸಿ ತನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ‘‘ಪರಿಸರದ ಸಮತೋಲನವನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕತೆಯನ್ನು ಸುದೃಢಗೊಳಿಸುವ ಎಲ್ಲಾ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ’’ ಎಂದು ಧಾಮಿ ಹೇಳಿದ್ದಾರೆ.