ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆ ಶುಕ್ರವಾರ ಆರಂಭ
► ಪ್ರಧಾನಿ ಮೋದಿ ಉದ್ಘಾಟನೆ ► ಕೇಂದ್ರ ಸಚಿವರು, ರಾಯಭಾರಿಗಳು, ಕೈಗಾರಿಕೋದ್ಯಮಿಗಳ ಉಪಸ್ಥಿತಿ ► 44 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಿಲಾನ್ಯಾಸ
ಡೆಹ್ರಾಡೂನ್: ‘ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023’ ಯನ್ನು ಪ್ರಧಾನಿ ಮೋದಿ ಶುಕ್ರವಾರ ಡೆಹ್ರಾಡೂನ್ನಲ್ಲಿ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ದೇಶಾದ್ಯಂತದ ಹಾಗೂ ವಿಶ್ವದಾದ್ಯಂತದ ಸಾವಿರಾರು ಹೂಡಿಕೆದಾರರು, ಪ್ರತಿನಿಧಿಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡೆಹ್ರಾಡೂನ್ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಶೃಂಗಸಭೆ ನಡೆಯಲಿದ್ದು, ‘ಶಾಂತಿಯಿಂದ ಸಮೃದ್ಧಿ ’ ಥೀಮ್ ಆಗಿರುವುದು. ಶೃಂಗಸಭೆಯ ಎಲ್ಲಾ ಸಿದ್ಧತೆಗಳನ್ನು ರಾಜ್ಯ ಸರಕಾರವು ಪೂರ್ಣಗೊಳಿಸಿರುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ಸಿಂಗ್ ಧಾಮಿ ತಿಳಿಸಿದ್ದಾರೆ.
ಉತ್ತರಾಖಂಡವನ್ನು ನೂತನ ಹೂಡಿಕೆ ತಾಣವಾಗಿ ರೂಪಿಸುವ ಉದ್ದೇಶದಿಂದ ಉತ್ತರಾಖಂಡ ಸರಕಾರವು ಈ ಶೃಂಗಸಭೆಯನ್ನು ಆಯೋಜಿಸಿದೆ. ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 2.5 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಸಂಪಾದಿಸುವ ಗುರಿಯನ್ನು ರಾಜ್ಯಸರಕಾರವು ಹೊಂದಿದೆ. ಇದರ ಜೊತೆಗೆ ಕೈಗಾರಿಕಾ ಸಮೂಹಗಳ ಜೊತೆ ತಿಳುವಳಿಕಾ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹೂಡಿಕೆ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಮೂಲಕ ರಾಜ್ಯದಲ್ಲಿ ಉದ್ಯೋಗವನ್ನು ಸೃಷ್ಟಿಸಲು ತನ್ನ ಸರಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆಯೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹೂಡಿಕೆದಾರರ ಶೃಂಗಸಭೆಯ ಹಿನ್ನೆಲೆಯಲ್ಲಿ ದೇಶದ ನಗರಗಳಲ್ಲಿ ಹಾಗೂ ವಿದೇಶದಲ್ಲಿ ಲಂಡನ್ ದುಬೈ,ಬರ್ಮಿಂಗಗ್ ಹ್ಯಾಂ ಮತ್ತಿತರ ವಿಶ್ವದ ಮಹಾನಗರಗಳಲ್ಲಿ ರೋಡ್ ಶೋಗಳನ್ನು ನಡೆಸಲಾಗಿತ್ತು.
ಕೇಂದ್ರದ ಮೂವರು ಸಚಿವರು ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳು ಉತ್ತರಾಖಂಡದ ಏಳು ಸಂಪುಟ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಎಂಪಿಗಳು, ಶಾಸಕರು ಸೇರಿದಂತೆ ಹಲವಾರು ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ 8 ಮಂದಿ ಪ್ರಮುಖ ಕೈಗಾರಿಕೋದ್ಯಮಿಗಳು ಭಾಷಣ ಮಾಡಲಿದ್ದಾರೆ. ಸ್ಪೇನ್, ಸ್ಲೋವೆನಿಯಾ, ನೇಪಾಳ,ಕ್ಯೂಬಾ, ಗ್ರೀಸ್, ಆಸ್ಟ್ರಿಯ, ಜಪಾನ್, ಸೌದಿ ಆರೇಬಿಯ , ಇತ್ಯಾದಿ ದೇಶಗಳ 15 ಮಂದಿ ರಾಯಭಾರಿಗಳು, ದೂತಾವಾಸಗಳ ಮುಖ್ಯಸ್ಥರು, ಪ್ರಮುಖ ಕೈಗಾರಿಕೋದ್ಯಮಿಗಳು ಕೂಡಾ ಪಾಲ್ಗೊಳ್ಳಲಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 44 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಉತ್ಪಾದನಾ ವಲಯ, ಪ್ರವಾಸೋದ್ಯಮ ಮೂಲ ಸೌಕರ್ಯ ವಲಯ ಸೇರಿದಂತೆ 16 ಯೋಜನೆಗಳು ಅವುಗಳಲ್ಲಿ ಒಳಗೊಂಡಿವೆ. ಉತ್ತರಾಖಂಡದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿರುವುದು ಇದೇ ಮೊದಲ ಸಲವಾಗಿದೆ ಎಂದು ಉತ್ತರಾಖಂಡ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.