ಉತ್ತರಾಖಂಡ: ಭಾರೀ ಮಳೆ, ಮೇಘ ಸ್ಫೋಟ
ಸಾಂದರ್ಭಿಕ ಚಿತ್ರ | Photo: PTI
ಉತ್ತರಕಾಶಿ: ಇಲ್ಲಿನ ಹಲವು ಸ್ಥಳಗಳಲ್ಲಿ ಭಾರೀ ಮಳೆ ಹಾಗೂ ಮೇಘ ಸ್ಫೋಟ ಸಂಭವಿಸಿರುವುದರಿಂದ ಹಲವು ರಸ್ತೆ, ಮನೆ ಹಾಗೂ ಅಂಗಡಿಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಮಳೆ ಸಂಬಂಧಿ ಯಾವುದೇ ದುರ್ಘಟನೆಗಳು ವರದಿಯಾಗಿಲ್ಲ.
ಉತ್ತರಕಾಶಿ ಜಿಲ್ಲಾಧಿಕಾರಿ ಅಭಿಷೇಕ್ ರುಹೇಲಾ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿಯಿಂದ ಪರಿಸ್ಥಿತಿ ಕುರಿತಂತೆ ಶನಿವಾರ ಮುಂಜಾನೆ ವರದಿ ಕೋರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರು ಜನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಮಳೆಯಿಂದ ಸಂತ್ರಸ್ತರಾದ ಜನರು ಹಾಗೂ ಅವರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಉಂಟಾದ ಹಾನಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ನೀಡುವಂತೆ
ರುಹೇಲಾ ಅವರು ಎಲ್ಲ ಉಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಾರ್ಕೋಟ್ ತೆಹ್ಸಿಲ್ನ ಗಂಗನಾನಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರವಾಸಿ ಧಾಮದ ಕೆಲವು ಗುಡಿಸಲುಗಳಿಗೆ ಹಾನಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಗಂಗನಾನಿಯಲ್ಲಿರುವ ಕಸ್ತೂರ್ಬಾ ಗಾಂಧಿ ಗರ್ಲ್ಸ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣಕ್ಕೆ ಕೆಸರು ಪ್ರವೇಶಿಸಿದೆ. ಆದರೆ, ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ರಾತ್ರಿಯಿಂದ ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮ ನೀರು ಹಾಗೂ ಕೆಸರು ಕ್ಯಾಂಪಸ್ ಪ್ರವೇಶಿಸಿದೆ ಎಂದು ಕಸ್ತೂರ್ಬಾ ಗಾಂಧಿ ಗರ್ಲ್ಸ್ ರೆಸಿಡೆನ್ಸಿಯಲ್ ಸ್ಕೂಲ್ನ ವಾರ್ಡನ್ ಸರೋಜಿನಿ ತಿಳಿಸಿದ್ದಾರೆ. ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ಶಾಲೆಗೆ ತಲುಪಿದ್ದಾರೆ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಭೂಕುಸಿತ ಸಂಭವಿಸಿದ ಪರಿಣಾಮ ಬಾರ್ಕೋಟ್ ಹಾಗೂ ಗಂಗಾನಾನಿ ನಡುವೆ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಹಲವು ಸ್ಥಳಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರೋಲಾದ ಛಾರಾ ಖಾಡ್ನಲ್ಲಿ ಕೂಡ ಮೇಘ ಸ್ಪೋಟ ಹಾಗೂ ಭೂಕುಸಿತ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಲಾಗಿದ್ದ ಹಲವು ವಾಹನಗಳು ಮಣ್ಣಿನ ಅಡಿ ಹೂತು ಹೋಗಿವೆ. ಸಂತ್ರಸ್ತ ಜನರನ್ನು ಶನಿವಾರ ಬೆಳಗ್ಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಧುಂತ್ರಿ ಗ್ರಾಮದಲ್ಲಿ ಕೂಡ ಭೂಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.