ಆಸ್ಪತ್ರೆಯಿಂದ ಮನೆಗೆ ವಾಪಸಾಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ, ಕೊಲೆ
ಪಶ್ಚಿಮ ಬಂಗಾಳದ ಬೆನ್ನಲ್ಲೇ ಉತ್ತರಾಖಂಡದಲ್ಲಿ ಮತ್ತೊಂದು ಪ್ರಕರಣ
Photo credit: jagran.com
ಹೊಸದಿಲ್ಲಿ: ಕೊಲ್ಕತ್ತಾ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿರುವ ನಡುವೆ ಉತ್ತರಾಖಂಡದ ಬಿಲಾಸ್ಪುರದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ನರ್ಸ್ ಒಬ್ಬರನ್ನು ಅತ್ಯಾಚಾರಗೈದು ಕೊಲೆಗೈದ ಘಟನೆ ವರದಿಯಾಗಿದೆ.
30 ಹರೆಯದ ನರ್ಸ್ ಜುಲೈ 30ರ ರಾತ್ರಿ ನಾಪತ್ತೆಯಾಗಿದ್ದಾರೆಂದು ದೂರು ದಾಖಲಾಗಿತ್ತು. ಒಂದು ವಾರದ ನಂತರ ಆಕೆಯ ಮೃತದೇಹ ಬಿಲಾಸಪುರದ ವಸುಂಧರಾ ಎಂಕ್ಲೇವ್ ಸಮೀಪದ ಖಾಲಿ ಜಮೀನಿನಲ್ಲಿ ಪತ್ತೆಯಾಗಿತ್ತು.
ತನ್ನ ಕರ್ತವ್ಯ ಮುಗಿಸಿ ಮನೆಗೆ ಆಟೋರಿಕ್ಷಾದಲ್ಲಿ ತೆರಳಿದ್ದರು ಆದರೆ ಆಕೆ ತಮ್ಮ ಬಾಡಿಗೆ ಮನೆ ತಲುಪಿರಲಿಲ್ಲ.
ನರ್ಸ್ ಪತ್ತೆ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಒಂದು ವಾರದ ನಂತರ ಮೃತದೇಹ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಹಾಗೂ ನರ್ಸ್ ರ ನಾಪತ್ತೆಯಾದ ಫೋನ್ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆಕೆಯ ಫೋನ್ ಬರೇಲಿ ನಿವಾಸಿ ಧರ್ಮೇಂದ್ರ ಬಳಿ ಇರುವುದು ತಿಳಿದು ಬಂದಿತ್ತು. ಆದರೆ ಅದಾಗಲೇ ಆತನ ಕುಟುಂಬ ತನ್ನ ಮನೆಯಿಂದ ಕಾಲ್ಕಿತ್ತಿತ್ತು. ಪೊಲೀಸರು ನಂತರ ಧರ್ಮೇಂದ್ರನನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಿದ್ದರು.
ಆತನ ವಿಚಾರಣೆ ನಡೆಸಿದಾಗ ಕಾರ್ಮಿಕನಾಗಿರುವ ಆತ ನರ್ಸ್ ಮೇಲೆ ದಾಳಿ ನಡೆಸಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕೊಂಡೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಸ್ಕಾರ್ಫ್ ಬಳಸಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದನ್ನು ಬಹಿರಂಗಪಡಿಸಿದ್ದ. ನಂತರ ಆಕೆಯ ಮೊಬೈಲ್ ಫೋನ್, ನಗದಿನೊಂದಿಗೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.