ಉತ್ತರಾಖಂಡ ಸುರಂಗ ಕುಸಿತ: ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತೊಂದು ಅಡ್ಡಿ
Photo: PTI
ಹೊಸದಲ್ಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಡೆಯುತ್ತಿರುವ ಕಾರ್ಯಾಚರಣೆ ಇನ್ನೇನು ಅಂತಿಮ ಹಂತಕ್ಕೆ ಬಂತೆನ್ನುವಾಗ ಶುಕ್ರವಾರ ಸಂಜೆ ಮತ್ತೊಂದು ಅಡ್ಡಿ ಎದುರಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮತ್ತೆ ಸ್ಥಗಿತಗೊಳಿಸಬೇಕಾಗಿ ಬಂತು.
ಇದಕ್ಕೂ ಮೊದಲು ಗುರುವಾರ ಡ್ರಿಲ್ಲಿಂಗ್ ಯಂತ್ರವನ್ನಿರಿಸಲಾಗಿದ್ದ ಕಟ್ಟೆಯಲ್ಲಿ ಬಿರುಕು ಕಂಡ ಮೇಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇದನ್ನು ಸರಿಪಡಿಸಿ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಡ್ರಿಲ್ಲಿಂಗ್ ಯಂತ್ರಕ್ಕೆ ಲೋಹದ ವಸ್ತುವಿನಿಂದ ಮತ್ತೆ ಅಡ್ಡಿಯುಂಟಾಯಿತು.
ಡ್ರಿಲ್ಲಿಂಗ್ ಮತ್ತೆ ಶೀಘ್ರ ಪುನರಾರಂಭಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರೂ ಶುಕ್ರವಾರ ತಡ ಸಂಜೆವರೆಗೆ ಡ್ರಿಲ್ಲಿಂಗ್ ಆರಂಭಗೊಂಡಿಲ್ಲ.
ನೆಲದಡಿ ಹೋಗಿ ಪರಿಶೀಲಿಸುವ ರಾಡಾರ್, ಮುಂದಿನ ಐದು ಮೀಟರ್ ತನಕ ಯಾವುದೇ ಲೋಹದ ವಸ್ತುಗಳ ಅಡ್ಡಿಯಿಲ್ಲ ಎಂದು ತಿಳಿಸಿದೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಮ್ಮೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಾಗ ರಕ್ಷಿಸಿದ ಕಾರ್ಮಿಕರನ್ನು ತಕ್ಷಣ ವೈದ್ಯಕೀಯ ಕೇಂದ್ರಗಳಿಗೆ ಗ್ರೀನ್ ಕಾರಿಡಾರುಗಳ ಮೂಲಕ ಸಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಒಟ್ಟು 41 ಆಂಬುಲೆನ್ಸ್ಗಳನ್ನು ಹತ್ತಿರದಲ್ಲೇ ನಿಲ್ಲಿಸಲಾಗಿದೆ.