ಒಳಚರಂಡಿ ಸ್ವಚ್ಛತೆಗೆ ರೊಬೋಟ್ ಬಳಸಲು ಮುಂದಾದ ಉತ್ತರಾಖಂಡ
ಡೆಹ್ರಾಡೂನ್: ರಾಜ್ಯದ ವಿವಿಧೆಡೆ ಒಳಚರಂಡಿ ಸ್ವಚ್ಛಗೊಳಿಸಲು ಕೇರಳ ಯುವಕರ ಸ್ಟಾರ್ಟಪ್ ಅಭಿವೃದ್ಧಿಪಡಿಸಿದ ರೊಬೊಟಿಕ್ ಸ್ಕಿಮ್ಮಿಂಗ್ ಮೆಷಿನ್ (RSM)ಗಳನ್ನು ಬಳಸಲು ಉತ್ತರಾಖಂಡ ಜಲಸಂಸ್ಥಾನ ನಿರ್ಧರಿಸಿದೆ.
ಕಳೆದ ಕೆಲ ವರ್ಷಗಳಲ್ಲಿ ಒಳಚರಂಡಿಯಲ್ಲಿ ವಿಷಾನಿಲ ಕಾರಣದಿಂದ ಸ್ವಚ್ಛತಾ ಕಾರ್ಮಿಕರು ಮೃತಪಟ್ಟ ಘಟನೆಗಳ ಹಿನ್ನೆಲೆಯಲ್ಲಿ ಜಲ ಸಂಸ್ಥಾನ ಈ ನಿರ್ಧಾರ ಕೈಗೊಂಡಿದೆ. RSM ರೋಬೋಟ್ ಗಳ ಬಳಕೆಯಿಂದಾಗಿ ಮುಂದಿನ ದಿನಗಳಲ್ಲಿ ಒಳಚರಂಡಿ ಸ್ವಚ್ಛತಾ ಕಾರ್ಯದ ವೇಳೆ ಮ್ಯಾನ್ ಹೋಲ್ ಗಳ ವಿಷಾನಿಲದಿಂದಾಗಿ ಮೃತಪಡುವ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಇಳಿಯಲಿದೆ. ರಾಜ್ಯದ ಯಾವುದೇ ಕಡೆಗಳಿಗೆ ಇದನ್ನು ಸುಲಭವಾಗಿ ಒಯ್ಯಲು ಕೂಡಾ ಸಾಧ್ಯ ಎಂದು ಇಲಾಖೆ ಹೇಳಿದೆ.
ರೊಬೋಟಿಕ್ ಒಳಚರಂಡಿ ಸ್ವಚ್ಛತಾ ಯಂತ್ರವನ್ನು ಖರೀದಿಸುವ ಪ್ರಕ್ರಿಯೆಯನ್ನು ಜಲಸಂಸ್ಥಾನದ ದಕ್ಷಿಣ ವಿಭಾಗ ಆರಂಭಿಸಿದೆ. ಮೊದಲ ರೊಬೋಟ್ ಸೇವೆ ಆರಂಭಿಸಲು ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದರ ಫಲಿತಾಂಶ ಉತ್ತಮವಾಗಿ ಕಂಡುಬಂದ ಬಳಿಕ ರಾಜಧಾನಿಯಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗುತ್ತದೆ. ರಾಜ್ಯದ ಇತರ ಕಡೆಗಳಲ್ಲೂ ಮುಂದಿನ ದಿನಗಳಲ್ಲಿ ಈ ಸೇವೆ ಬಳಸಿಕೊಳ್ಳಲಾಗುವುದು ಎಂದು ಜಲಸಂಸ್ಥಾನ ಕಾರ್ಯನಿರ್ವಾಹಕ ಎಂಜಿನಿಯರ್ ಆಶೀಶ್ ಭಟ್ ಹೇಳಿದ್ದಾರೆ.
ಒಳಚರಂಡಿ ಲೈನ್ ಗಳ ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸುವ ವೇಳೆ ಅವುಗಳಿಂದ ಹೊರಸೂಸುವ ವಿಷಾನಿಲಗಳಿಂದಾಗಿ ಕಾರ್ಮಿಕರು ಮೃತಪಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ ಇಂಥ ಮೂರು ಪ್ರಕರಣಗಳು ಸಂಭವಿಸಿವೆ.