ಹುತಾತ್ಮ ಯೋಧನ ಕುಟುಂಬದ ಹೊಣೆ ಹೊತ್ತ ಗ್ರಾಮಸ್ಥರು!
Photo: timesofindia.indiatimes.com
ಡೆಹ್ರಾಡೂನ್: ಜಮ್ಮು ಮತ್ತು ಕಾಶ್ಮೀರದ ಕಟೂವಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಐವರು ಸೈನಿಕ ಪೈಕಿ ಒಬ್ಬರಾದ ಉತ್ತರಾಖಂಡದ ಹವೀಲ್ದಾರ್ ಕಮಲ್ ಸಿಂಗ್ ರಾವತ್ (28) ಅವರಿಗೆ ಸಾವಿರಾರು ಮಂದಿ ಗ್ರಾಮಸ್ಥರು ಭಾವಪೂರ್ಣ ವಿದಾಯ ನೀಡಿದರು. ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರ ಕಣ್ಣಾಲಿಗಳು ತುಂಬಿದ್ದವು. ಬುಧವಾರ ಬೆಳಿಗ್ಗೆ ಪೌರಿ ಗರ್ವಾಲ್ ಜಿಲ್ಲೆಯ ಪಾಪ್ರಿ ಗ್ರಾಮದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.
ಕುಟುಂಬದ ಏಕೈಕ ಆಧಾರಸ್ತಂಭ ಎನಿಸಿದ್ದ ಕಮಲ್ ಅವರ ಅಂತಿಮಯಾತ್ರೆಯಲ್ಲಿ 'ಕಮಲ್ ಸಿಂಗ್ ಅಮರ್ ರಹೇ', 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಕಮಲ್ ಅವರ ಪತ್ನಿ, ತಾಯಿ ಹಾಗೂ ಐದು ಮತ್ತು ಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಮೂಹಿಕ ಪ್ರತಿಜ್ಞೆ ಕೈಗೊಳ್ಳುವ ಮೂಲಕ ಗ್ರಾಮಸ್ಥರು ಮಾನವೀಯತೆ ಮೆರೆದರು.
"ನಮ್ಮ ಕೆಚ್ಚೆದೆಯ ವೀರರ ಜೀವಗಳನ್ನು ಬಲಿ ಪಡೆದ ಈ ದಾಳಿಯ ವಿರುದ್ಧ ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ಇವರು ನಮ್ಮ ಗ್ರಾಮದ ಹೆಮ್ಮೆಯ ಪುತ್ರ. ಇದು ನಾವು ನಿರ್ವಹಿಸಬೇಕಾದ ಕನಿಷ್ಠ ಜವಾಬ್ದಾರಿ" ಎಂದು ಗ್ರಾಮದ ಮುಖ್ಯಸ್ಥ ರಾಜ್ಪಾಲ್ ಸಿಂಗ್ ಗುಸ್ಯನ್ ಹೇಳಿದರು.
ಏತನ್ಮಧ್ಯೆ ಘಟನೆಯಲ್ಲಿ ಹುತಾತ್ಮರಾದ ಮತ್ತೊಬ್ಬ ಯೋಧ ಡೆಹ್ರಾಡೂನ್ನ ನಾಯ್ಕ ವಿನೋದ್ ಸಿಂಗ್ ಭಂಡಾರಿ (33) ಅವರ ಅಂತ್ಯಸಂಸ್ಕಾರ ಕೂಡಾ ಸಕಲ ಮಿಲಿಟರಿ ಗೌರವಗಳೊಂದಿಗೆ ಬುಧವಾರ ನೆರವೇರಿತು. ನಿವೃತ್ತ ಸೇನಾ ಜವಾನ ತಂದೆ ನಾಯ್ಕ್ ಬೀರ್ಸಿಂಗ್ ಭಂಡಾರಿ ಮತ್ತು ಮೂವರು ಸಹೋದರಿಯರು ತಮ್ಮ ಏಕೈಕ ಸಹೋದರನ ಶವಪೆಟ್ಟಿಗೆಗೆ ಹೆಗಲುಕೊಟ್ಟರು.