ಉತ್ತರಾಖಂಡ: ಕ್ಯಾಮರ ಮೂಲಕ ಸುರಂಗದೊಳಗೆ ಸಿಕ್ಕಿಹಾಕಿಕೊಂಡವರ ವೀಕ್ಷಣೆ
ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತ ; ವಾಕಿ-ಟಾಕಿ ಮೂಲಕ ಮಾತುಕತೆ
Photo: PTI
ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗವೊಂದು ಕುಸಿದ 10 ದಿನಗಳ ಬಳಿಕ, ಮಂಗಳವಾರ, ಒಳಗೆ ಸಿಕ್ಕಿಹಾಕಿಕೊಂಡವರ ಮೊದಲ ಚಿತ್ರಗಳನ್ನು ಪಡೆಯುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸುರಂಗ ಮಾರ್ಗದ ಒಂದು ಭಾಗವು ನವೆಂಬರ್ 12ರಂದು ಕುಸಿದಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಈ ನಿರ್ಮಾಣ ಹಂತದ ಸುರಂಗವು ಉತ್ತರಾಖಂಡದಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸುವ ಚಾರ್ ಧಮ್ ರಸ್ತೆ ಯೋಜನೆಯ ಭಾಗವಾಗಿದೆ.
ಮಂಗಳವಾರ ಬೆಳಗ್ಗೆ, ರಕ್ಷಣಾ ತಂಡವು ಆರು ಇಂಚು ಅಗಲದ ಪೈಪ್ಲೈನ್ ಮೂಲಕ ಕ್ಯಾಮರವೊಂದನ್ನು ಸುರಂಗದ ಒಳಗೆ ಕಳುಹಿಸಿತು ಹಾಗೂ ವಾಕಿ-ಟಾಕಿ ಮೂಲಕ ಕಾರ್ಮಿಕರೊಂದಿಗೆ ಮಾತನಾಡಿತು. ಕ್ಯಾಮರದ ಜೊತೆಗೆ ವಾಕಿ-ಟಾಕಿಯೊಂದನ್ನೂ ಒಳಗೆ ಕಳುಹಿಸಲಾಗಿತ್ತು.
ಕಾರ್ಮಿಕರಿಗಾಗಿ ಬೆಳಗ್ಗಿನ ಉಪಹಾರವನ್ನು ಕೂಡ ಪೈಪ್ಲೈನ್ ಮೂಲಕ ಕಳುಹಿಸಲಾಯಿತು. ಸುರಂಗ ಕುಸಿದ ಬಳಿಕ ಮೊದಲ ಬಾರಿಗೆ ಕಾರ್ಮಿಕರು ತೃಪ್ತಿಕರ ಊಟ ಮಾಡಿದರು. ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಗುವಂತೆ ಮೊಬೈಲ್ ಫೋನ್ ಚಾರ್ಜರ್ಗಳನ್ನೂ ಕುಳುಹಿಸಿಕೊಡಲಾಯಿತು.
53 ಮೀಟರ್ ಉದ್ದ ಮತ್ತು 6 ಇಂಚು ಅಗಲದ ಪೈಪ್ಲೈನನ್ನು ಸೋಮವಾರ ಅವಶೇಷಗಳ ನಡುವಿನಿಂದ ಕೊರೆಯಲಾಗಿತ್ತು.
ರಂಧ್ರ ಕೊರೆಯುವ ಕಾರ್ಯಾಚರಣೆಯಲ್ಲಿ 2 ಬಾರಿ ವಿಫಲ
ಇದಕ್ಕೂ ಮೊದಲು, ಆರು ಇಂಚು ಅಗಲದ ಪೈಪನ್ನು ಒಳಗೆ ಕಳುಹಿಸುವ ಕಾರ್ಯಾಚರಣೆಯಲ್ಲಿ ರಕ್ಷಣಾ ತಂಡವು ಎರಡು ಬಾರಿ ವಿಫಲವಾಗಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಮಗ ನಿಯಮಿತ ನಿರ್ದೇಶಕ ಅಂಶು ಮನೀಶ್ ಖಾಲ್ಖೊ ಹೇಳಿದರು. ಕಾರ್ಯಾಚರಣೆಗೆ ಬಂಡೆಯೊಂದು ಅಡ್ಡವಾಗಿತ್ತು.
ಬೆಟ್ಟದ ಮೇಲಿನಿಂದ ಲಂಬ ಕೋನದಲ್ಲಿ ಕೊರೆಯಲಾದ ರಂಧ್ರದ ಮೂಲಕ ಆರು ಇಂಚು ಅಗಲದ ಪೈಪ್ಲೈನನ್ನು ಕಳುಹಿಸಲಾಗಿದೆ. ಇನ್ನೊಂದು ಸಮತಲ ಸುರಂಗವನ್ನು ಅವಶೇಷಗಳ ಮೂಲಕ ಹಾದುಹೋಗುವಂತೆ ಕೊರೆಯುವ ಪ್ರಯತ್ನವನ್ನು ಮಾಡಲಾಗುವುದು ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.
90 ಸೆಂ.ಮೀಟರ್ ಅಗಲದ ಪೈಪ್ ಮೂಲಕ ಕಾರ್ಮಿಕರನ್ನು ಹೊರಗೆ ತರುತ್ತೇವೆ : ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ
ಇದು ನಾವು ಸಾಧಿಸಿದ ಮೊದಲ ಯಶಸ್ಸು ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.
‘‘ನಮ್ಮ ಪ್ರಧಾನ ಕೆಲಸ 90 ಸೆಂಟಿಮೀಟರ್ ಅಗಲ ಪೈಪ್ಗಳ ಮೂಲಕ ಕಾರ್ಮಿಕರನ್ನು ಹೊರತೆಗೆಯುವುದು. ಇದು (6 ಇಂಚು ಅಗಲದ ಪೈಪ್ ಕಳುಹಿಸಿರುವುದು) ಕೇವಲ ಮೊದಲ ಹೆಜ್ಜೆ. ಇದರ ಮೂಲಕ ನಾವು ಮೊಬೈಲ್ ಫೋನ್ ಗಳು, ಮತ್ತು ಚಾರ್ಜರ್ಗಳನ್ನು ಕಳುಹಿಸಬಹುದಾಗಿದೆ. ಅವರೊಂದಿಗೆ ಮಾತೂ ಆಡಬಹುದಾಗಿದೆ. ವೈದ್ಯರೊಂದಿಗೆ ಮಾತನಾಡಿದ ಬಳಿಕ ನಾವು ಆಹಾರದ ಪಟ್ಟಿಯೊಂದನ್ನು ತಯಾರಿಸಿದ್ದೇವೆ. ವೈದ್ಯರ ಸಲಹೆಯಂತೆ ಆಹಾರ ತಯಾರಿಸುತ್ತಿದ್ದೇವೆ’’ ಎಂದು ಅವರು ಹೇಳಿದರು.
ಪರಿಸ್ಥಿತಿ ತಿಳಿಯಲು ಮುಖ್ಯಮಂತ್ರಿ ಜೊತೆ ಮಾತನಾಡಿದ ಪ್ರಧಾನಿ ಮೋದಿ
ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ 10 ದಿನಗಳಿಂದ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆ ಮಾತನಾಡಿದರು. ಪ್ರಧಾನಿ ಸೋಮವಾರವೂ ಮುಖ್ಯಮಂತ್ರಿಯೊಂದಿಗೆ ಈ ವಿಷಯದಲ್ಲಿ ಮಾತನಾಡಿದ್ದರು.
ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎಂದು ನಾನು ಪ್ರಧಾನಿಗೆ ಹೇಳಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪುಷ್ಕರ್ ಸಿಂಗ್ ಧಾಮಿ ಬರೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಅತ್ಯಂತ ಮಹತ್ವದ ಆದ್ಯತೆಯಾಗಿದೆ ಎನ್ನುವುದನ್ನು ಪ್ರಧಾನಿ ಪುನರುಚ್ಚರಿಸಿದರು ಎಂದು ಧಾಮಿ ಹೇಳಿದ್ದಾರೆ.
ನ.12ರಂದು ಸುರಂಗ ಮಾರ್ಗ ಕುಸಿದ ಬಳಿಕ, ಮೋದಿಯು ಧಾಮಿ ಜೊತೆ ಮಾತನಾಡಿರುವುದು ಮಂಗಳವಾರ ನಾಲ್ಕನೆ ಬಾರಿಯಾಗಿದೆ.
ಅವಶೇಷದ ಮೂಲಕ ಆರು ಇಂಚು ಅಗಲದ ಪೈಪನ್ನು ಯಶಸ್ವಿಯಾಗಿ ಕೊರೆದು ಒಳಗೆ ಸಿಕ್ಕಿಹಾಕಿಕೊಂಡವರನ್ನು ತಲುಪಲಾಗಿದೆ ಎನ್ನುವ ವಿಷಯವನ್ನು ನಾನು ಮೋದಿಗೆ ತಿಳಿಸಿದೆ ಎಂದು ಧಾಮಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.