“ಅಮೂಲ್ಯ ಸಮಯ ನಷ್ಟವಾಗಿದೆ”: ಅತ್ಯಾಚಾರ ಸಂತ್ರಸ್ತೆಯ ಅರ್ಜಿ ವಿಚಾರಣೆ ಮುಂದೂಡಿದ ಗುಜರಾತ್ ಹೈಕೋರ್ಟ್ ಗೆ ಸುಪ್ರೀಂ ತರಾಟೆ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: 26 ವಾರಗಳ ತನ್ನ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಬೇಕೆಂದು ಕೋರಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಮುಂದೂಡಿರುವುದಕ್ಕೆ ಸುಪ್ರೀಂಕೋರ್ಟ್ ವಿಶೇಷ ಪೀಠವು ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಬಾಕಿಯಿರಿಸಿದ್ದರಿಂದ ಅಮೂಲ್ಯ ಸಮಯ ನಷ್ಟವಾಗಿದೆ ಎಂದು ಅದು ಹೇಳಿದೆ.
25 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯು, ತನ್ನ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಕೋರಿ ಆಗಸ್ಟ್ 7ರಂದು ಗುಜರಾತ್ ಹೈಕೋರ್ಟ್ ನ ಮೆಟ್ಟಿಲೇರಿದ್ದರು ಹಾಗೂ ಪ್ರಕರಣದ ವಿಚಾರಣೆಯನ್ನು ಮಾರನೆ ದಿನ ಕೈಗೆತ್ತಿಕೊಳ್ಳಲಾಗಿತ್ತು. ಸಂತ್ರಸ್ತೆಯ ಗರ್ಭಾವಸ್ಥೆಯ ಸ್ಥಿತಿಗತಿಯನ್ನು ದೃಢಪಡಿಸಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಆಗಸ್ಟ್ 8 ರಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆಕೆಯ ಪರೀಕ್ಷೆ ನಡೆಸಿದ ವೈದ್ಯಕೀಯ ಕಾಲೇಜ್ ಆಸ್ಪತ್ರೆಯು ಆಗಸ್ಟ್ 10ರಂದು ವರದಿ ಸಲ್ಲಿಸಿತ್ತು. ಆದಾಗ್ಯೂ ಆಗಸ್ಟ್ 11ರಂದು ಹೈಕೋರ್ಟ್ ವರದಿಯನ್ನು ದಾಖಲಿಸಿಕೊಂಡಿತ್ತು. ವಿಚಿತ್ರವೆಂಬಂತೆ ಪ್ರಕರಣದ ಆಲಿಕೆಯನ್ನು ನ್ಯಾಯಾಲಯವು 12 ದಿನಗಳವರೆಗೆ ಮುಂದೂಡಿತ್ತು.
ಪ್ರಕರಣದ ವಿಚಾರಣೆಯನ್ನು ನಡೆಸುವಲ್ಲಿ ಗುಜರಾತ್ ಹೈಕೋರ್ಟ್ ವಿಳಂಬಿಸಿದ್ದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಆಕ್ಷೇಪ ವ್ಯಕ್ತಪಡಿಸಿತು. ಇಂತಹ ಪ್ರಕರಣಗಳ ವಿಚಾರಣೆಗೆ ಔದಾಸಿನ್ಯದ ಮನೋಭಾವನೆ ಸಲ್ಲದು ಎಂದು ಅದು ಹೇಳಿದೆ.
ಅರ್ಜಿದಾರರ ಪರ ವಕೀಲರು ಪ್ರಕರಣದ ಸ್ಥಿತಿಗತಿಯನನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಆದರೆ ಅವರ ಅಹವಾಲನ್ನು ಆಗಸ್ಟ್ 17ರಂದು ತಿರಸ್ಕರಿಸಿತ್ತು ಮತ್ತು ಹೈಕೋರ್ಟ್ ನ ವೆಬ್ಸೈಟ್ನಲ್ಲಿ ಆದೇಶವನ್ನು ಅಪ್ಲೋಡ್ ಕೂಡಾ ಮಾಡಿಲ್ಲವೆಂದು ನ್ಯಾಯಪೀಠ ತಿಳಿಸಿತ್ತು.
ಕೇವಲ ಪ್ರಕರಣವನ್ನು ಮುಂದೂಡುವ ಮೂಲಕ ನ್ಯಾಯಪೀಠವು ಅಮೂಲ್ಯ ದಿನಗಳನ್ನು ಕಳೆದುಕೊಂಡಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಸಂತ್ರಸ್ಥೆ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಲೇರಿದಾಗ ಆಕೆ ಆಗಲೇ 26 ವಾರಗಳ ಗರ್ಭಿಣಿಯಾಗಿದ್ದಳೆಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಆಲಿಕೆಯನ್ನು ತಾನು ಆಗಸ್ಟ್ 21ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿತು. ಈ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಏಜೆನ್ಸಿಗಳಿಂದ ಉತ್ತರವನ್ನು ಕೂಡಾ ಅದು ಕೋರಿದೆ.