ಇಸ್ರೇಲ್ ಗೆ ನೆರವು ನೀಡಿದ ಆರೋಪ: ʼಸ್ಟಾರ್ ಬಕ್ಸ್ʼ ಬಹಿಷ್ಕರಿಸುವಂತೆ ಕರೆ ನೀಡಿದ ಖ್ಯಾತ ನಟ ಮೈಕೆಲ್ ಮಲಾರ್ಕಿ
ನಟ ಮತ್ತು ಸಂಗೀತಗಾರ ಮೈಕೆಲ್ ಮಲಾರ್ಕಿ (X \ @mkmalarkey) , ಸ್ಟಾರ್ ಬಕ್ಸ್ (PC : X)
ಅಮೆರಿಕ: ಗಾಝಾದಲ್ಲಿ ನರಮೇಧಕ್ಕೆ ಇಸ್ರೇಲ್ ಗೆ ನೆರವು ನೀಡಿದ ಆರೋಪದಲ್ಲಿ ಬ್ರಿಟಿಷ್ ಮೂಲದ ಅಮೆರಿಕನ್ ನಟ ಮತ್ತು ಸಂಗೀತಗಾರ ಮೈಕೆಲ್ ಮಲಾರ್ಕಿ ಪ್ರಸಿದ್ಧ ಸ್ಟಾರ್ ಬಕ್ಸ್ ಬ್ರಾಂಡ್ ಕಾಫಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಗಾಝಾದಲ್ಲಿನ ನರಮೇಧಕ್ಕೆ ಇಸ್ರೇಲ್ ಗೆ ಸ್ಟಾರ್ ಬಕ್ಸ್ ಬೆಂಬಲಿಸಿದೆ ಮತ್ತು ನೆರವು ನೀಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ದಿ ವ್ಯಾಂಪೈರ್ ಡೈರೀಸ್ ಚಿತ್ರದ ನಟ ಮೈಕೆಲ್ ಮಲಾರ್ಕಿ ಕಾರ್ಯಕ್ರಮವೊಂದರಲ್ಲಿ ಸ್ಟಾರ್ ಬಕ್ಸ್ ಕಾಫಿಯನ್ನು ಕುಡಿಯಲು ನಿರಾಕರಿಸಿದ್ದಲ್ಲದೆ, ಸ್ಟಾರ್ ಬಕ್ಸ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮೈಕೆಲ್ ಮಲಾರ್ಕಿ ಗೆ ಕಾಫಿ ತಂದಿಡಲಾಗಿತ್ತು. ಕಾಫಿ ಕುಡಿಯಲೆಂದು ಬಾಟಲಿ ಕೈಯ್ಯಲ್ಲಿ ಹಿಡಿದುಕೊಂಡಾಗ ಅವರಿಗೆ ಅದು ಸ್ಟಾರ್ ಬಕ್ಸ್ ನದ್ದು ಎಂದು ಗೊತ್ತಾಗಿದೆ. ತಕ್ಷಣ ಕಾಫಿಯನ್ನು ಕೆಳಗಿಟ್ಟ ಮೈಕೆಲ್ ಮಲಾರ್ಕಿ, ಕ್ಷಮಿಸಿ ಅದು ಸ್ಟಾರ್ ಬಕ್ಸ್ ಕಾಫಿ ಎಂದು ನನಗೆ ತಿಳಿದಿರಲಿಲ್ಲ. ನಾನು ಸ್ಟಾರ್ ಬಕ್ಸ್ ಕಾಫಿ ಕುಡಿಯುವುದಿಲ್ಲ. ಸ್ಟಾರ್ ಬಕ್ಸ್ ಅನ್ನು ನಾನು ತಿರಸ್ಕರಿಸುತ್ತೇನೆ. ನೀವು ಕೂಡ ಅದನ್ನು ತಿರಸ್ಕರಿಸಬೇಕು. ನನಗೆ ಇನ್ನು ಸ್ಟಾರ್ ಬಕ್ಸ್ ಕಾಫಿ ನೀಡಬೇಡಿ, ಧನ್ಯವಾದಗಳು ಎಂದು ಹೇಳಿದ್ದಾರೆ.
ಸ್ಟಾರ್ ಬಕ್ಸ್ ಬ್ರ್ಯಾಂಡ್ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರೂ, ಕಾರ್ಯಕ್ರಮದ ವೇದಿಕೆಯಲ್ಲಿ ಮಲಾರ್ಕಿ ಕಾಫಿ ಕುಡಿಯಲು ನಿರಾಕರಿಸಿದ್ದಾರೆ. ಗಾಝಾದಲ್ಲಿ ಯುದ್ಧಪರಾಧಕ್ಕೆ ಬಹಿಷ್ಕಾರಕ್ಕೆ ಒಳಗಾದ ಅನೇಕ ಕಂಪನಿಗಳಲ್ಲಿ ಸ್ಟಾರ್ ಬಕ್ಸ್ ಕೂಡ ಒಂದಾಗಿದೆ. ಈ ಮೊದಲು ಸ್ಟಾರ್ ಬಕ್ಸ್ ಫೆಲೆಸ್ತೀನ್ ಪರ ಬೆಂಬಲಿಗರಿಂದ ಬಹಿಷ್ಕಾರವನ್ನು ಎದುರಿಸಿತ್ತು.
ಸ್ಟಾರ್ ಬಕ್ಸ್ ಕಾಫಿ ಬ್ರಾಂಡ್ ಇಸ್ರೇಲ್ ಮಿಲಿಟರಿಗೆ ಹಣವನ್ನು ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಸ್ಟಾರ್ ಬಕ್ಸ್ ಬಹಿಷ್ಕರಿಸುವಂತೆ ಆಗ್ರಹ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ #boycottstarbucks ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು.