ವಂದೇಭಾರತ್ ರೈಲಿನ ಹೊಸ ಬಣ್ಣವು ರಾಷ್ಟ್ರ ಧ್ವಜದಿಂದ ಸ್ಫೂರ್ತಿಗೊಂಡಿದೆ: ಕೇಂದ್ರ ರೈಲ್ವೆ ಸಚಿವ
Photo : Twitter /@AshwiniVaishnaw
ಚೆನ್ನೈ: ಸ್ವದೇಶಿ ನಿರ್ಮಿತ ಮಧ್ಯಮ ವೇಗದ ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ 28ನೇ ಸರಣಿಯು ಕೇಸರಿ ಬಣ್ಣ ಹೊಂದಿರಲಿದೆ ಎಂದು ಶನಿವಾರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಹೊಸ ಕೇಸರಿ ಬಣ್ಣದ ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ ಕಾರ್ಯಾಚರಣೆ ಈವರೆಗೆ ಪ್ರಾರಂಭವಾಗಿಲ್ಲ ಹಾಗೂ ಈ ರೈಲನ್ನು ಸದ್ಯ ವಂದೇಭಾರತ್ ರೈಲನ್ನು ನಿರ್ಮಾಣ ಮಾಡುವ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿಲುಗಡೆ ಮಾಡಲಾಗಿದೆ.
"ಈವರೆಗೆ ಒಟ್ಟು 25 ವಂದೇಭಾರತ್ ಎಕ್ಸ್ಪ್ರೆಸ್ ರೈಲುಗಳು ನಿಗದಿತ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೆರಡು ರೈಲುಗಳನ್ನು ಮೀಸಲಿಡಲಾಗಿದೆ. ಈ ಪೈಕಿ 28ನೇ ಸರಣಿಯ ಬಣ್ಣವನ್ನು ಪ್ರಾಯೋಗಿಕವಾಗಿ ಬದಲಿಸಲಾಗುತ್ತಿದೆ" ಎಂದು ರೈಲ್ವೆ ಅಧಿಕಾರಿಗಳು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಶನಿವಾರದಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್, ದಕ್ಷಿಣ ರೈಲ್ವೆಯಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರಲ್ಲದೆ, ವಂದೇಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿನ ಸುಧಾರಣೆಗಳನ್ನೂ ಪರಾಮರ್ಶಿಸಿದರು.
ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, "ಸ್ವದೇಶಿ ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ 28ನೇ ಸರಣಿಯ ಹೊಸ ಬಣ್ಣವು ರಾಷ್ಟ್ರ ಧ್ವಜದ ತ್ರಿವರ್ಣದಿಂದ ಸ್ಫೂರ್ತಿಗೊಂಡಿದೆ" ಎಂದು ತಿಳಿಸಿದ್ದಾರೆ.
ವಂದೇಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ 25 ಸುಧಾರಣೆಗಳನ್ನು ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಇದು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಾಗಿದೆ. ಅರ್ಥಾತ್ ನಮ್ಮದೇ ಎಂಜಿನಿಯರ್ಗಳು ಹಾಗೂ ತಂತ್ರಜ್ಞರನ್ನು ಬಳಸಿಕೊಂಡು ಭಾರತದಲ್ಲೇ ವಿನ್ಯಾಸಗೊಳಿಸಲಾಗಿದೆ. ವಂದೇಭಾರತ್ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾರ್ಯಾಚರಣೆಯ ತಂಡದಿಂದ ಹವಾನಿಯಂತ್ರಣ, ಶೌಚಾಲಯ ಇತ್ಯಾದಿಗಳ ಕುರಿತು ಬರುವ ಅಭಿಪ್ರಾಯಗಳನ್ನು ಆಧರಿಸಿ, ಅದರ ವಿನ್ಯಾಸವನ್ನು ಸುಧಾರಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಸ್ವದೇಶಿ ಮಧ್ಯಮ ವೇಗದ ರೈಲುಗಳ ನಿರ್ಮಾಣ ಯೋಜನೆಯು 2017ರ ಮಧ್ಯಭಾಗದಲ್ಲಿ ಪ್ರಾರಂಭವಾಯಿತು ಹಾಗೂ ಕೇವಲ 18 ತಿಂಗಳ ಅವಧಿಯಲ್ಲಿ ಐಸಿಎಫ್ 18ನೇ ರೈಲು ನಿರ್ಮಾಣ ಮಾಡಿತ್ತು. ಭಾರತದಲ್ಲಿ ನಿರ್ಮಾಣಗೊಂಡ ಸ್ಥಾನಮಾನ ಕಲ್ಪಿಸಲು ಭಾರತದ ಈ ಮೊಟ್ಟ ಮೊದಲ ಮಧ್ಯಮ ವೇಗದ ರೈಲಿಗೆ 2019ರಲ್ಲಿ ವಂದೇಭಾರತ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ಈ ರೈಲು ಕೋಟಾ-ಸವಾಯಿ ಮಧೋಪುರ್ ವಿಭಾಗದಲ್ಲಿ ಗರಿಷ್ಠ 180 ಕಿಮೀ ವೇಗವನ್ನು ಗಳಿಸಿದೆ.