ವಾರಣಾಸಿ: ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು
ನರೇಂದ್ರ ಮೋದಿ | PTI
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರನೇ ಸಲ ಗೆಲುವು ಸಾಧಿಸಿದ್ದಾರೆ.
ಮೋದಿ ತನ್ನ ನಿಕಟ ಪ್ರತಿಸ್ಪರ್ಧಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ ರಾಯ್ ಅವರನ್ನು 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬಿಎಸ್ಪಿಯ ಅತಹರ್ ಜಮಾಲ್ ಲಾರಿ ಅವರಿಗೆ ಮೋದಿಯವರಿಗಿಂತ ಸುಮಾರು 5.8 ಲಕ್ಷ ಮತಗಳು ಕಡಿಮೆ ಬಿದ್ದಿವೆ.
ಬಿಜೆಪಿಯು 2004ನ್ನು ಹೊರತುಪಡಿಸಿ 1991ರಿಂದ ಒಂಬತ್ತು ಸಲ ವಾರಣಾಸಿ ಕ್ಷೇತ್ರವನ್ನು ಗೆದ್ದುಕೊಂಡಿದೆ. 2004ರಲ್ಲಿ ಕಾಂಗ್ರೆಸ್ ನ ಆರ್.ಕೆ.ಮಿಶ್ರಾ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಇಂದು ಮತ ಎಣಿಕೆ ಸಂದರ್ಭದಲ್ಲಿ ಸ್ವಲ್ಪ ಸಮಯ ರಾಯ್ ಪ್ರತಿಪಕ್ಷಗಳ ಭರವಸೆಯನ್ನು ಹೆಚ್ಚಿಸಿದ್ದರು. ವಾರಣಾಸಿ ಕ್ಷೇತ್ರದಲ್ಲಿ ಈ ಹಿಂದಿನ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಸೋಲು ಕಂಡಿದ್ದ ರಾಯ್ ಆರಂಭಿಕ ಹಂತದಲ್ಲಿ ಮೋದಿಯವರಿಗಿಂತ 6,233 ಮತಗಳ ಮುನ್ನಡೆಯನ್ನು ಸಾಧಿಸುವ ಮೂಲಕ ಸ್ವಲ್ಪ ಸಮಯ ಭಾರತೀಯ ಚುನಾವಣಾ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆಘಾತವನ್ನು ನೀಡುವಂತೆ ಕಂಡುಬಂದಿದ್ದರು. ಆದರೆ ಗಂಟೆಗಳು ಉರುಳಿದಂತೆ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡ ಮೋದಿ ಬಹುದೂರ ಸಾಗಿದ್ದು,ಅಂತಿಮವಾಗಿ 6.12 ಲಕ್ಷಕ್ಕೂ ಅಧಿಕ ಮತಗಳೊಂದಿಗೆ ವಿಜಯಮಾಲೆಯನ್ನು ಧರಿಸಿದರು.
ಆದಾಗ್ಯೂ ಮೋದಿಯವರ ಗೆಲುವಿನ ಅಂತರ ಈ ಹಿಂದಿನ ಎರಡು ಚುನಾವಣೆಗಳಿಗಿಂತ ಕಡಿಮೆಯಾಗಿದೆ. 2014 ಸಾರ್ವತ್ರಿಕ ಚುನಾವಣೆಗಳಲ್ಲಿ 3,71,784 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅವರು 2019ರಲ್ಲಿ 4,79,505 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.