ದೇವಸ್ಥಾನದ ಎರಡು ಕಿ.ಮೀ.ವ್ಯಾಪ್ತಿಯ ಮಾಂಸದಂಗಡಿಗಳನ್ನು ಮುಚ್ಚಲು ವಾರಣಾಸಿ ಮನಪಾ ಸೂಚನೆ
ಸಾಂದರ್ಭಿಕ ಚಿತ್ರ | PC : indianexpress.com
ವಾರಣಾಸಿ: ವಾರಣಾಸಿ ಮಹಾನಗರ ಪಾಲಿಕೆಯು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಇಲ್ಲಿಯ ವಿಶ್ವನಾಥ ದೇವಸ್ಥಾನದ ಎರಡು ಕಿ.ಮೀ.ವ್ಯಾಪ್ತಿಯಲ್ಲಿನ ಮಾಂಸದಂಗಡಿಗಳನ್ನು ಮುಚ್ಚುವಂತೆ ಅವುಗಳ ಮಾಲಿಕರಿಗೆ ನೋಟಿಸ್ಗಳನ್ನು ನೀಡಿದೆ.
ಮನಪಾ ಕಳೆದ ವರ್ಷ ವಿಶ್ವನಾಥ ದೇವಸ್ಥಾನದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಮಾಂಸದಂಗಡಿಗಳನ್ನು ನಡೆಸುವುದನ್ನು ನಿಷೇಧಿಸಿ ಅಂಗೀಕರಿಸಿದ್ದ ನಿರ್ಣಯದ ಆಧಾರದಲ್ಲಿ ಈ ಅಂಗಡಿಗಳನ್ನು ಮುಚ್ಚಲು ನಿರ್ದೇಶನವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತಮಗೆ ಯಾವುದೇ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸದೆ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಮಾಲಿಕರು ಆರೋಪಿಸಿದ್ದಾರೆ.
ಕಳೆದ ವರ್ಷದ ಮಾರ್ಚ್ನಲ್ಲಿ ಅಂಗಡಿಗಳನ್ನು ಮುಚ್ಚುವಂತೆ ನೋಟಿಸ್ಗಳನ್ನು ನೀಡಲಾಗಿತ್ತು. ಅದನ್ನು ಮಾಲಿಕರು ಪಾಲಿಸಿರಲಿಲ್ಲ,ಇದೀಗ ಎರಡನೇ ಬಾರಿಗೆ ನೋಟಿಸ್ಗಳನ್ನು ಹೊರಡಿಸಲಾಗಿದೆ ಎಂದು ಮನಪಾದ ಪಶು ವೈದ್ಯಾಧಿಕಾರಿ ಡಾ.ಸಂತೋಷ ಪಾಲ್ ತಿಳಿಸಿದರು.
ಈವರೆಗೆ 26 ಅಂಗಡಿಗಳನ್ನು ಗುರುತಿಸಿ,ಅವುಗಳನ್ನು ಮುಚ್ಚುವಂತೆ ಆದೇಶವನ್ನು ಪಾಲಿಸದಿದ್ದಕ್ಕಾಗಿ ನೋಟಿಸ್ಗಳನ್ನು ನೀಡಲಾಗಿದೆ. ಅಂಗಡಿಗಳ ಮಾಲಿಕರ ವಿರುದ್ಧ ಸ್ಥಳೀಯ ಪೋಲಿಸರಿಗೆ ದೂರನ್ನೂ ಸಲ್ಲಿಸಲಾಗಿದೆ ಎಂದರು.
ಶುಕ್ರವಾರ ಮಾಂಸದಂಗಡಿಗಳ ಮಾಲಿಕರ ನಿಯೋಗವು ವಾರಣಾಸಿ ಮೇಯರ್ ಅಶೋಕ ತಿವಾರಿಯವರನ್ನು ಭೇಟಿಯಾಗಿ,ಈ ವಿಷಯದಲ್ಲಿ ಅವರ ಮಧ್ಯಪ್ರವೇಶವನ್ನು ಕೋರಿತ್ತು.
ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತಿವಾರಿ,ತಮ್ಮ ಅಂಗಡಿಗಳಿಗೆ ಪರ್ಯಾಯ ಸ್ಥಳಗಳನ್ನು ಕಂಡುಕೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ ಮತ್ತು ಮನಪಾ ಅವರಿಗೆ ಸ್ಥಳವನ್ನು ಮಂಜೂರು ಮಾಡುತ್ತದೆ ಎಂದು ಭರವಸೆ ನೀಡಿದ್ದೇನೆ. ಯಾರದೇ ವ್ಯವಹಾರವನ್ನು ಮುಚ್ಚಿಸುವುದರಲ್ಲಿ ತನಗೆ ನಂಬಿಕೆಯಿಲ್ಲ ಎಂದು ತಿಳಿಸಿದರು. ಈ ಮಾಂಸದಂಗಡಿಗಳು ಯಾವುದೇ ಪರವಾನಿಗೆಯಿಲ್ಲದೆ ಕಾರ್ಯಾಚರಿಸುತ್ತಿವೆ ಎಂದು ಅವರು ಬೆಟ್ಟು ಮಾಡಿದರು.
ಈ ನಡುವೆ,ಸೋಮವಾರ ಮತ್ತೊಮ್ಮೆ ಮೇಯರ್ರನ್ನು ಭೇಟಿಯಾಗಲು ಮಾಂಸದಂಗಡಿಗಳ ಮಾಲಿಕರು ನಿರ್ಧರಿಸಿದ್ದಾರೆ.