ಬಿಜೆಪಿ ಸೇರಲು ವಾಸನ್ ನೇತೃತ್ವದ ತಮಿಳು ಮಾನಿಲ ಕಾಂಗ್ರೆಸ್ ನಿರ್ಧಾರ
ಜಿ.ಕೆ. ವಾಸನ್ | Photo: thehindu.com
ಚೆನ್ನೈ: ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ನೇತೃತ್ವದ ಎನ್ಡಿಎ ಸೇರಲು ನಿರ್ಧರಿಸಲಾಗಿದೆ ಎಂದು ಜಿ.ಕೆ. ವಾಸನ್ ನೇತೃತ್ವದ ತಮಿಳ್ ಮಾನಿಲ ಕಾಂಗ್ರೆಸ್ (ಟಿಎಂಸಿ) ಸೋಮವಾರ ಹೇಳಿದೆ.
2021ರ ವಿಧಾನ ಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಇದ್ದ ಟಿಎಂಸಿ ಎಐಎಡಿಎಂಕೆ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಹೊರತಾಗಿಯೂ ಈಗ ಎನ್ಡಿಎ ಸೇರಲು ನಿರ್ಧರಿಸಿದೆ.
ತಮಿಳು ಮಾನಿಲ ಕಾಂಗ್ರೆಸ್ ಬಿಜೆಪಿ ನೇತೃತ್ವದ ಎನ್ಡಿಎಯ ಭಾಗವಾಗಿ ಮುಂದಿನ ಚುನಾವಣೆಯನ್ನು ಎದುರಿಸಲಿದೆ ಎಂದು ಜಿ.ಕೆ. ವಾಸನ್ ಅವರು ತಿಳಿಸಿದ್ದಾರೆ.
ಇದನ್ನು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ ವಾಸನ್, ಬಿಜೆಪಿ ರಾಷ್ಟ್ರೀಯ ನಾಯಕರು ರವಿವಾರ ಬೆಳಗ್ಗೆ ದೂರವಾಣಿಯಲ್ಲಿ ತನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಅನಂತರ ರವಿವಾರ ರಾತ್ರಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯ ಪಕ್ಷದ ಉಸ್ತುವಾರಿ ಅರವಿಂದ ಮೆನನ್ ಕರೆ ಮಾಡಿದರು ಹಾಗೂ ರಾಜ್ಯದಲ್ಲಿ ರಾಜಕೀಯ ಸನ್ನಿವೇಶದ ಕುರಿತು ಚರ್ಚೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.
ಮೆನನ್ ಅವರು ತನ್ನನ್ನು ಆಹ್ವಾನಿಸಿದ್ದಾರೆ ಎಂದು ಹೇಳಿದ ಅವರು, ತಿರುಪುರ ಜಿಲ್ಲೆಯ ಪಲ್ಲದಂನಲ್ಲಿ ಫೆಬ್ರವರಿ 27ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ತಾನು ಪಾಲ್ಗೊಳ್ಳಲಿದ್ದೇನೆ ಎಂದು ಅವರು ಹೇಳಿದರು.