ಮಹಾರಾಷ್ಟ್ರ ಚುನಾವಣೆ | ನಾಮಪತ್ರ ಸಲ್ಲಿಸಲು ತಡವಾಗಿ ಬಂದು ಅವಕಾಶ ಕಳೆದುಕೊಂಡ ಮಾಜಿ ಸಚಿವ!
PHOTO : PTI
ನಾಗ್ಪುರ : ಮಹಾರಾಷ್ಟ್ರದ ಮಾಜಿ ಸಚಿವ, ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಅನೀಸ್ ಅಹ್ಮದ್ ಡಿಸಿ ಕಚೇರಿಗೆ ತಡವಾಗಿ ಬಂದು ನಾಮಪತ್ರ ಸಲ್ಲಿಕೆಗಿದ್ದ ಅವಕಾಶವನ್ನು ಕಳೆದುಕೊಂಡಿದ್ದು, ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ.
ಅನೀಸ್ ಅಹ್ಮದ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ)ಗೆ ಸೇರ್ಪಡೆಗೊಂಡಿದ್ದರು. ನಾಗ್ಪುರ ಸೆಂಟ್ರಲ್ ಕ್ಷೇತ್ರದಿಂದ ವಂಚಿತ್ ಬಹುಜನ ಅಘಾಡಿ ಅನೀಸ್ ಅಹ್ಮದ್ ಗೆ ಟಿಕೆಟ್ ನೀಡಿತ್ತು. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ಗಡುವಾಗಿತ್ತು. ಆದರೆ ಅನೀಸ್ ಅಹ್ಮದ್ ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಕೆಗೆ ಹಾಜರಾಗಿರಲಿಲ್ಲ.
ನಾಮಪತ್ರ ಸಲ್ಲಿಕೆಗೆ ಬರುವ ವೇಳೆ ಭದ್ರತಾ ಪ್ರೋಟೋಕಾಲ್ ಗಳು, ವಾಹನ ದಟ್ಟನೆ ಸೇರಿದಂತೆ ಹಲವಾರು ಅಡೆತಡೆಗಳನ್ನು ಎದುರಿಸಿರುವುದಾಗಿ ಅನೀಸ್ ಅಹ್ಮದ್ ಹೇಳಿಕೊಂಡಿದ್ದಾರೆ. ಇದರಿಂದ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿದ್ದ ಕೊನೆಯ ಗಡುವು ಮೀರಿ ಕಚೇರಿಯ ಬಾಗಿಲು ಮುಚ್ಚಿತ್ತು.
ಮೂರು ಬಾರಿ ಶಾಸಕರಾಗಿದ್ದ ಹಿರಿಯ ನಾಯಕನಿಗೆ ನಾಮಪತ್ರ ಸಲ್ಲಿಕೆಗೆ ಗಡುವು ಹೇಗೆ ತಪ್ಪುತ್ತದೆ ಎಂಬ ಪ್ರಶ್ನೆಗಳು ಭುಗಿಲೆದ್ದಿದೆ. ಕಾಂಗ್ರೆಸ್ ವರಿಷ್ಠರು ಅವರನ್ನು ಸ್ಪರ್ಧಿಸದಂತೆ ಮನವೊಲಿಸಿದ್ದರಿಂದ ಅವರು ಉದ್ದೇಶಪೂರ್ವಕವಾಗಿಯೇ ಈ ಹೈಡ್ರಾಮ ಸೃಷ್ಟಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಕಾಂಗ್ರೆಸ್ ಈ ಬಾರಿ ಸಾಕಷ್ಟು ಮುಸ್ಲಿಂ ಬಾಹುಲ್ಯದ ನಾಗ್ಪುರ ಸೆಂಟ್ರಲ್ ಕ್ಷೇತ್ರದಿಂದ ಅಹ್ಮದ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಬಂಟಿ ಶೆಲ್ಕೆ ಅವರನ್ನು ನಾಗ್ಪುರ ಸೆಂಟ್ರಲ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಇದರಿಂದ ಅಸಮಾಧಾನಗೊಂಡು ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.