ಐಐಟಿ ಬಾಂಬೆಯ ಕ್ಯಾಂಟೀನ್ ಗೋಡೆಯಲ್ಲಿ ‘ಸಸ್ಯಹಾರಿಗಳಿಗೆ ಮಾತ್ರ’ ಪೋಸ್ಟರ್
ಆಹಾರ ತಾರತಮ್ಯದ ಬಗ್ಗೆ ವಿದ್ಯಾರ್ಥಿಗಳ ದೂರು
Photo: NDTV
ಮುಂಬೈ: ಐಐಟಿ ಬಾಂಬೆ ಹಾಸ್ಟೆಲ್ ನ ಒಂದು ಕ್ಯಾಂಟೀನ್ ನ ಗೋಡೆಯಲ್ಲಿ ‘ಸಸ್ಯಹಾರಿಗಳಿಗೆ ಮಾತ್ರ’ ಪೋಸ್ಟರ್ ಹಾಕಿದ ಬಳಿಕ ಆಹಾರ ತಾರತಮ್ಯದ ವಿರುದ್ಧ ಇಲ್ಲಿನ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ.
ಐಐಟಿ ಬಾಂಬೆಯ ಹಾಸ್ಟೆಲ್ 12ರ ಕ್ಯಾಂಟೀನ್ ನ ಗೋಡೆಯಲ್ಲಿ ಕಳೆದ ವಾರ ‘ಸಸ್ಯಹಾರಿಗಳು ಮಾತ್ರ ಇಲ್ಲಿ ಕುಳಿತುಕೊಳ್ಳಲು ಅನುಮತಿಸಲಾಗಿದೆ’ ಎಂಬ ಪೋಸ್ಟರ್ ಹಾಕಲಾಗಿತ್ತು. ಈ ಪೋಸ್ಟರ್ನ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಐಟಿ ಬಾಂಬೆಯ ಅಧಿಕಾರಿಯೊಬ್ಬರು, ‘‘ನಾವು ಈ ಪೋಸ್ಟರ್ ಬಗ್ಗೆ ತಿಳಿದಿದ್ದೇವೆ. ಆದರೆ, ಕ್ಯಾಂಟೀನ್ ನಲ್ಲಿ ಇದನ್ನು ಯಾರು ಹಾಕಿದರು ಎಂಬುದು ತಿಳಿದಿಲ್ಲ.
ವಿವಿಧ ರೀತಿಯ ಆಹಾರವನ್ನು ಸೇವಿಸುವರಿಗೆ ಇಲ್ಲಿ ನಿಗದಿತ ಸ್ಥಳವಿಲ್ಲ. ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂಬ ಕುರಿತು ಸಂಸ್ಥೆಗೆ ತಿಳಿದಿಲ್ಲ ಎಂದಿದ್ದಾರೆ. ವಿದ್ಯಾರ್ಥಿ ಒಕ್ಕೂಟವಾದ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಈ ಘಟನೆಯನ್ನು ಖಂಡಿಸಿದ್ದಾರೆ ಹಾಗೂ ಪೋಸ್ಟರ್ ಅನ್ನು ಹರಿದು ಹಾಕಿದ್ದಾರೆ.
‘‘ಸಂಸ್ಥೆಯಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿ ಇಲ್ಲ. ಕೆಲವು ವ್ಯಕ್ತಿಗಳು ಕ್ಯಾಂಟೀನ್ನ ನಿರ್ದಿಷ್ಟ ಪ್ರದೇಶವನ್ನು ಸಸ್ಯಹಾರಿಗಳಿಗೆ ಮಾತ್ರ ಎಂದು ತಾವೇ ನಿರ್ಧರಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಇತರ ವಿದ್ಯಾರ್ಥಿಗಳು ಆಹಾರ ಸೇವಿಸದಂತೆ ನಿರ್ಬಂಧ ವಿಧಿಸಿದ್ದಾರೆ ಎಂಬುದು ಹಾಸ್ಟೆಲ್ನ ಪ್ರಧಾನ ಕಾರ್ಯದರ್ಶಿಯ ಇಮೇಲ್ ಹಾಗೂ ಆರ್ಟಿಐ ಮಾಹಿತಿಯಿಂದ ಬಹಿರಂಗಗೊಂಡಿದೆ’’ ಎಂದು ಎಪಿಪಿಎಸ್ಸಿ ಹೇಳಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಹಾಸ್ಟೆಲ್ನ ಪ್ರಧಾನ ಕಾರ್ಯದರ್ಶಿ ಎಲ್ಲ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿ, ‘‘ಹಾಸ್ಟೆಲ್ ಕ್ಯಾಂಟೀನ್ ನಲ್ಲಿ ಜೈನರಿಗೆ ಆಹಾರ ವಿತರಣೆಗೆ ಪ್ರತ್ಯೇಕ ಕೌಂಟರ್ ಇದೆ. ಆದರೆ, ಜೈನರಿಗೆ ಆಹಾರ ಸೇವಿಸಲು ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳವಿಲ್ಲ’’ ಎಂದು ತಿಳಿಸಿದ್ದಾರೆ.