ಸಲಿಂಗ ವಿವಾಹದ ಕುರಿತು ನಾಳೆ ಸುಪ್ರೀಂ ಕೋರ್ಟ್ ತೀರ್ಪು ಸಾಧ್ಯತೆ
Photo : PTI
ಹೊಸದಿಲ್ಲಿ: ಸಲಿಂಗ ವಿವಾಹದ ಕಾನೂನು ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಮನವಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಮೀಸಲಿರಿಸಿತ್ತು.
ಈ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಎಸ್.ಕೆ.ಕೌಲ್, ನ್ಯಾ. ಎಸ್.ಆರ್.ಭಟ್, ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ನಡೆಸುತ್ತಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಹಾಗೂ ಆ ಅರ್ಜಿಗಳಿಂದ ಎದುರಾಗಲಿರುವ ಕಾನೂನು ಮತ್ತು ಸಾಮಾಜಿಕ ಪ್ರಶ್ನೆಗಳ ಕುರಿತು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರಂತರವಾಗಿ ವಿಚಾರಣೆ ನಡೆಸಿತ್ತು.
ತಮ್ಮ ಸಂಬಂಧಕ್ಕೆ ‘ವಿವಾಹ’ ಎಂಬ ಕಾನೂನಾತ್ಮಕ ಹಾಗೂ ಸಾಮಾಜಿಕ ಸ್ಥಾನವನ್ನು ನೀಡಬೇಕು ಎಂದು ಕೋರಿ 18 ದಂಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಇದರೊಂದಿಗೆ, ಇಂತಹ ಸಂಬಂಧಗಳನ್ನು ವಿಶೇಷ ವಿವಾಹ ಕಾಯ್ದೆ ಅಡಿ ‘ವಿವಾಹ’ ಎಂದು ಘೋಷಿಸಬೇಕು ಎಂದೂ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ.
ವಿಚಾರಣೆ ಸಂದರ್ಭದಲ್ಲಿ “ಭಾರತವು ವಿವಾಹ ಆಧಾರಿತ ಸಂಸ್ಕೃತಿಯಾಗಿದ್ದು”, ಸಲಿಂಗ ದಂಪತಿಗಳಿಗೆ ವಿಜಾತಿ ದಂಪತಿಗಳಿಗೆ ನೀಡಲಾಗುವ ದಂಪತಿ ಸ್ಥಾನಮಾನವನ್ನು ಆರ್ಥಿಕ, ಬ್ಯಾಂಕಿಂಗ್ ಹಾಗೂ ವಿಮಾ, ವೈದ್ಯಕೀಯ, ಜೀವವನ್ನು ಕೊನೆಗಾಣಿಸಿಕೊಳ್ಳುವಿಕೆ, ಪಿತ್ರಾರ್ಜಿತ ಹಾಗೂ ಉತ್ತರಾಧಿಕಾರ ವಿಷಯಗಳಲ್ಲಿ ಹಾಗೂ ದತ್ತು ಸ್ವೀಕಾರ ಮತ್ತು ಬಾಡಿಗೆ ತಾಯ್ತನದ ವಿಚಾರಗಳಲ್ಲೂ ಮಂಜೂರು ಮಾಡಬೇಕು” ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಆದರೆ, ಸಲಿಂಗ ವಿವಾಹಕ್ಕೆ ವೈವಾಹಿಕ ಸ್ಥಾನಮಾನ ನೀಡುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ರೂಢಿಗಳೊಂದಿಗೆ ಸಂಬಂಧ ಹೊಂದಿರುವ ಕಾನೂನಾತ್ಮಕ ತೊಡಕು ಎದುರಾಗಲಿದೆ. ಹೀಗಾಗಿ ಈ ವಿಷಯವು ವೈಯಕ್ತಿಕ ಕಾನೂನಿನಡಿ ರಾಷ್ಟ್ರ ಹಾಗೂ ಸಾಮಾಜಿಕ ಮಟ್ಟದಲ್ಲಿ ವಿಸ್ತಾರ ಚರ್ಚೆಗೊಳಗಾಗಬೇಕಿದೆ ಎಂದು ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಎದುರು ಪ್ರತಿವಾದ ಮಂಡಿಸಿವೆ.