ಹಿರಿಯ ಪತ್ರಕರ್ತ, ಚಿತ್ರ ನಿರ್ಮಾಪಕ ಪ್ರೀತೀಶ್ ನಂದಿ ನಿಧನ
ಪ್ರೀತೀಶ್ ನಂದಿ (Photo:X/@sardesairajdeep)
ಮುಂಬೈ: ಹಿರಿಯ ಪತ್ರಕರ್ತ, ಚಿತ್ರ ನಿರ್ಮಾಪಕ ಹಾಗೂ ಕವಿ ಪ್ರೀತೀಶ್ ನಂದಿ ಬುಧವಾರ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರೀತೀಶ್ ನಂದಿ, ದಕ್ಷಿಣ ಮುಂಬೈನ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಬುಧವಾರ ಸಂಜೆ ನೆರವೇರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್, ತಮ್ಮ ಅಗಲಿದ ಸ್ನೇಹಿತನಿಗೆ ಭಾವುಕ ವಿದಾಯ ಕೋರಿದ್ದಾರೆ.
ಶಿವಸೇನೆಯ ಮಾಜಿ ರಾಜ್ಯಸಭಾ ಸದಸ್ಯರೂ ಆಗಿದ್ದ ಪ್ರೀತೀಶ್ ನಂದಿ, ಪ್ರಾಣಿ ಹಕ್ಕುಗಳ ಪರ ಹೋರಾಟಗಾರರೂ ಆಗಿದ್ದರು.
ಅವರ ಮಾಲಕತ್ವದ ಪ್ರೀತೀಶ್ ನಂದಿ ಕಮ್ಯೂನಿಕೇಶನ್ಸ್ ಸಂಸ್ಥೆ ‘ಸುರ್’, ‘ಕಾಂಟೆ’, ‘ಝಂಕಾರ್ ಬೀಟ್ಸ್’, ‘ಚಮೇಲಿ’, ‘ಹಝಾರೋಂ ಕ್ವಾಯಿಶೆಂ ಐಸಿ’ ಹಾಗೂ ‘ಪ್ಯಾರ್ ಕೆ ಸೈಡ್ ಎಫೆಕ್ಟ್’ನಂತಹ ಹಲವು ಚಿತ್ರಗಳ ನಿರ್ಮಾಣ ಮಾಡಿತ್ತು. ಇದರೊಂದಿಗೆ ‘ಫೋರ್ ಮೋರ್ ಶಾಟ್ಸ್ ಪ್ಲೀಸ್’ ಎಂಬ ವೆಬ್ ಸರಣಿಯನ್ನೂ ನಿರ್ಮಿಸಿತ್ತು.
ಪ್ರೀತೀಶ್ ನಂದಿ ಇಂಗ್ಲಿಷ್ ನಲ್ಲಿ ಸುಮಾರು 40 ಕವನ ಸಂಕಲನಗಳನ್ನು ರಚಿಸಿದ್ದರು ಹಾಗೂ ಬೆಂಗಾಳಿ, ಉರ್ದು ಹಾಗೂ ಪಂಜಾಬಿಯ ಕವನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದರು.
ಪ್ರೀತೀಶ್ ನಂದಿಯ ನಿಧನಕ್ಕೆ ಇನ್ನಿತರ ಬಾಲಿವುಡ್ ಕಲಾವಿದರೂ ಸಂತಾಪ ವ್ಯಕ್ತಪಡಿಸಿದ್ದಾರೆ.