ಟಿಎಂಸಿ ನಾಯಕ ನಾಸಿರುದ್ದೀನ್ ಅಹ್ಮದ್ ಹೃದಯಾಘಾತದಿಂದ ನಿಧನ

ನಾಸಿರುದ್ದೀನ್ ಅಹ್ಮದ್ (Photo: X@nasiruddinaitc)
ಪಶ್ಚಿಮ ಬಂಗಾಳ : ಕಾಳಿಗಂಜ್ ವಿಧಾನಸಭಾ ಕ್ಷೇತ್ರದ ಶಾಸಕ, ಟಿಎಂಸಿ ನಾಯಕ ನಾಸಿರುದ್ದೀನ್ ಅಹ್ಮದ್ ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಸಿರುದ್ದೀನ್ ಅಹ್ಮದ್ ಅವರು ಶನಿವಾರ ರಾತ್ರಿ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ರವಿವಾರ ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ನಾಸಿರುದ್ದೀನ್ ಅಹ್ಮದ್ ಅವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪವನ್ನು ಸೂಚಿಸಿದ್ದು,"ನನ್ನ ಸಹೋದ್ಯೋಗಿ, ಕಾಳಿಗಂಜ್ ಶಾಸಕರಾದ ನಾಸಿರುದ್ದೀನ್ ಅಹ್ಮದ್ ಅವರ ಹಠಾತ್ ನಿಧನದಿಂದ ದುಃಖಿತಳಾಗಿದ್ದೇನೆ, ಅವರು ಓರ್ವ ಅನುಭವಿ ಸಮಾಜ ಸೇವಕ, ವಕೀಲ ಮತ್ತು ರಾಜಕಾರಣಿಯಾಗಿದ್ದು, ನಮ್ಮ ಬೆಲೆ ಕಟ್ಟಲಾಗದ ಆಸ್ತಿಯಾಗಿದ್ದರು. ನಾಸಿರುದ್ದೀನ್ ಅಹ್ಮದ್ ಅವರ ಕುಟುಂಬಕ್ಕೆ ಈ ಸಂದರ್ಭದಲ್ಲಿ ಸಂತಾಪವನ್ನು ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.
ಖ್ಯಾತ ವಕೀಲರಾಗಿದ್ದ ನಾಸಿರುದ್ದೀನ್ ಅಹ್ಮದ್ ಅವರು 2011 ಮತ್ತು 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು.