ಮೋದಿಯವರ ‘ಗ್ಯಾರಂಟಿ’ಗಳಿಗೆ ಸಿಕ್ಕ ಗೆಲುವು: ಬಿಜೆಪಿ ನಾಯಕರು
ನರೇಂದ್ರ ಮೋದಿ | Photo; ANI
ಹೊಸದಿಲ್ಲಿ: ರವಿವಾರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಜನತೆ ಮೋದಿಯವರ ಗ್ಯಾರಂಟಿಗಳಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಗ್ಯಾರಂಟಿಗಳನ್ನು ಈಡೇರಿಸುವ ಪ್ರಧಾನಿ ನರೇಂದ್ರ ಮೋದಿಯವರ ಭರವಸೆಯನ್ನು ಜನರು ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ತೋರಿಸಿವೆ ಎಂದು ಹೇಳಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಮೂರು ರಾಜ್ಯಗಳ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ, ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಮತ್ತು ಕಾಂಗ್ರೆಸ್ನ ಸುಳ್ಳು ಭರವಸೆಗಳನ್ನು ತಿರಸ್ಕರಿಸಿದ್ದಾರೆ ಎಂದರು.
ಜನರು ಮೋದಿಯವರ ಗ್ಯಾರಂಟಿಗಳಲ್ಲಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಜನರು ಮೋದಿಯವರ ಮತ್ತು ಕಳೆದ ಒಂಭತ್ತೂವರೆ ವರ್ಷಗಳಲ್ಲಿ ಅವರು ಮಾಡಿರುವ ಕೆಲಸದ ಹೆಸರಿನಲ್ಲಿ ಮತ ನೀಡಿದ್ದಾರೆ ಎಂದು ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ರಮಣಸಿಂಗ್ ಹೇಳಿದರೆ,ಮಧ್ಯಪ್ರದೇಶದಲ್ಲಿ ಐದನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನೇರಲು ಸಜ್ಜಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದಲ್ಲಿ ಬಿಜೆಪಿ ಗೆಲುವಿನ ಹೆಗ್ಗಳಿಕೆಯನ್ನು ಮೋದಿಯವರಿಗೆ ಸಲ್ಲಿಸಿದ್ದಾರೆ.
ಇದು ಮೋದಿಯವರು ನೀಡಿದ್ದ ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ’ ಮಂತ್ರದ ಗೆಲುವಾಗಿದೆ. ಇದು ಮೋದಿಯವರು ನೀಡಿದ್ದ ಗ್ಯಾರಂಟಿಗಳ ಗೆಲುವೂ ಆಗಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದರು.
ಮೋದಿಯವರ ಮಾರ್ಗದರ್ಶನದಿಂದಾಗಿ ಈ ಗೆಲುವು ಸಾಧ್ಯವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಹೇಳಿದರೆ,ಈ ಗೆಲುವು 2024ರ ಫಲಿತಾಂಶಗಳ ದಿಕ್ಸೂಚಿಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.
“ನಿಮಗೆ ನೀಡಲಾಗಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು, ಇದು ನನ್ನ ಗ್ಯಾರಂಟಿ” ಎಂದು ಮೋದಿ ಚುನಾವಣಾ ರ್ಯಾಲಿಗಳಲ್ಲಿ ಹೇಳಿದ್ದರು.