Fact Check | ಮಹಾ ಕುಂಭಮೇಳದ್ದು ಎನ್ನಲಾಗಿರುವ ಡ್ರೋನ್ ಪ್ರದರ್ಶನದ ವೀಡಿಯೊ ಅಸಲಿಗೆ ಟೆಕ್ಸಾಸ್ನದ್ದು...

Photo credit: thequint.com
ಹೊಸದಿಲ್ಲಿ: ಡ್ರೋನ್ ಪ್ರದರ್ಶನದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ್ದು ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಸಲಿಗೆ ಈ ವೀಡಿಯೊ ನವಂಬರ್ 2024ರಲ್ಲಿ ಅಮೆರಿಕದ ಟೆಕ್ಸಾಸ್ನಲ್ಲಿ ನಡೆದಿದ್ದ ಡ್ರೋನ್ ಪ್ರದರ್ಶನದ್ದಾಗಿದೆ ಎನ್ನುವುದನ್ನು ಸುದ್ದಿಸಂಸ್ಥೆಯು ಪತ್ತೆ ಹಚ್ಚಿದೆ.
ಈ ವೀಡಿಯೊದ ಸತ್ಯಾಸತ್ಯತೆಯ ಪರಿಶೀಲನೆಗೆ ಮುಂದಾದ ಸುದ್ದಿಸಂಸ್ಥೆಯ ಫ್ಯಾಕ್ಟ್ ಚೆಕ್ ಡೆಸ್ಕ್, ಸಂಬಂಧಿತ ಕೀ ವರ್ಡ್ ಸರ್ಚ್ ನಡೆಸಿದಾಗ ಅದು ಅಮೆರಿಕದ ಸ್ಕೈ ಎಲಿಮೆಂಟ್ಸ್ ಡ್ರೋನ್ ಶೋಸ್ ಹಂಚಿಕೊಂಡಿದ್ದ ಯೂಟ್ಯೂಬ್ ವಿಡಿಯೊಕ್ಕೆ ಕರೆದೊಯ್ದಿತ್ತು. ಈ ವೀಡಿಯೋದಲ್ಲಿನ ದೃಶ್ಯಾವಳಿಗಳು ಈಗ ವೈರಲ್ ಆಗಿರುವ ಕ್ಲಿಪ್ ಜೊತೆ ನಿಖರವಾಗಿ ಹೊಂದಿಕೆಯಾಗಿದ್ದು,ಸಾಂಟಾ ಕ್ಲಾಸ್ ಚಿತ್ರವನ್ನು ಒಳಗೊಂಡಿತ್ತು.
ಟೆಕ್ಸಾಸ್ನಲ್ಲಿ ನಡೆದಿದ್ದ ಡ್ರೋನ್ ಶೋ ವಿಂಟರ್ ವಂಡರ್ಲ್ಯಾಂಡ್ ಥೀಮ್ಗೆ ಮೀಸಲಾಗಿತ್ತು ಮತ್ತು ಸುಮಾರು 5,000 ಡ್ರೋನ್ಗಳೊಂದಿಗೆ ‘ಜಿಂಜರ್ಬ್ರೆಡ್ ವಿಲೇಜ್’ ಎಂದು ಕರೆಯಲ್ಪಟ್ಟಿತ್ತು. ಅದರಲ್ಲಿ ಕುಂಭಮೇಳ ಅಥವಾ ಭಾರತದ ಉಲ್ಲೇಖವಿಲ್ಲ.
2024, ನ.24ರಂದು ನಡೆದಿದ್ದ ಈ ಶೋದ ಇದೇ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಯೂಟ್ಯೂಬ್ ಚಾನೆಲ್ನಲ್ಲೂ ಹಂಚಿಕೊಳ್ಳಲಾಗಿತ್ತು.
ಇದರೊಂದಿಗೆ ಟೆಕ್ಸಾಸ್ನಲ್ಲಿ ನಡೆದಿದ್ದ ಡ್ರೋನ್ ಪ್ರದರ್ಶನದ ಹಳೆಯ ವೀಡಿಯೊವನ್ನೇ ಮಹಾ ಕುಂಭಮೇಳದ್ದು ಎಂದು ಸುಳ್ಳೇ ಹಂಚಿಕೊಳ್ಳಲಾಗಿದೆ ಎನ್ನುವುದು ಸ್ವಷ್ಟವಾಗಿದೆ.
ಈ ಲೇಖನವನ್ನು ಮೊದಲು thequint.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.