ಉತ್ತರಾಖಂಡದಲ್ಲಿ ಜೈನ ದಿಗಂಬರ ಮುನಿಗಳಿಗೆ ಕಿರುಕುಳ; ವೀಡಿಯೋ ವೈರಲ್
ತನಿಖೆಗೆ ಎಸ್ಐಟಿ ರಚನೆ
Photo Credit: X/@MithilaWaala
ಡೆಹ್ರಾಡೂನ್: ಇಬ್ಬರು ದಿಗಂಬರ ಜೈನ ಮುನಿಗಳಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಈ ಘಟನೆಯ ತನಿಖೆಗೆ ಉತ್ತರಾಖಂಡ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.
ಆರೋಪಿ ತೆಹ್ರಿ ಜಿಲ್ಲೆಯ ನಿವಾಸಿಯೆನ್ನಲಾಗಿದ್ದು ಆತನ ವಿರುದ್ಧ ಐಪಿಸಿ ಹಾಗೂ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೀಡಿಯೋದಲ್ಲಿ ದಿಗಂಬರ ಜೈನ ಮುನಿಗಳು ರಸ್ತೆ ಬದಿಯಲ್ಲಿ ಕುಳಿತುಕೊಂಡಿರುವಾಗ ಆರೋಪಿ ಅವರಿಗೆ ಕಿರುಕುಳ ನೀಡುತ್ತಿರುವುದು ಹಾಗೂ ಬಟ್ಟೆ ಧರಿಸದೆ ಸಾರ್ವಜನಿಕವಾಗಿ ಏಕೆ ಕಾಣಿಸಿಕೊಳ್ಳಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ.
ಮುನಿಗಳು ವಿವರಣೆ ನೀಡಲು ಯತ್ನಿಸಿದರೂ ಆ ವ್ಯಕ್ತಿ ಸಮಾಧಾನಗೊಳ್ಳದೇ ಇದ್ದಾಗ ಅವರು ಯಾವುದೇ ಪ್ರಶ್ನೆಗೆ ಉತ್ತರಿಸದೆ ಅಲ್ಲಿಂದ ತೆರಳುತ್ತಿರುವುದು ಕಾಣಿಸುತ್ತದೆ.
“ಈ ವೀಡಿಯೋ ದಿಗಂಬರ ಮುನಿಗಳ ಭಾವನೆಗಳಿಗೆ ನೋವುಂಟು ಮಾಡಿದೆ, ಉತ್ತರಾಖಂಡ ಎಲ್ಲಾ ಧರ್ಮಗಳ ಜನರ ಭಾವನೆಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮಕ್ಕೆ ಅಗೌರವ ಸಹಿಸುವುದಿಲ್ಲ, ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುವುದು,” ಎಂದು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಹೇಳಿದ್ದಾರೆ.